ತುಮಕೂರು: ತಾಯಿಯ ಅಗಲಿಕೆಯ ನೋವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಎಂಜಿನಿಯರ್ ಓರ್ವರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ. ಮೃತರನ್ನು ಮಂಜುಪ್ರಸಾದ್ ಎಂದು ಗುರುತಿಸಲಾಗಿದ್ದು, ದೇವರಾಯನದುರ್ಗ ಬೆಟ್ಟದ ಮೇಲಿಂದ ಜಿಗಿದು ಜೀವನ ಅಂತ್ಯಗೊಳಿಸಿದ್ದಾರೆ. ಈ ಘಟನೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಸಹೋದ್ಯೋಗಿಗಳನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ.
ಮೂಲತಃ ತುಮಕೂರು ಜಿಲ್ಲೆಯ ಸತ್ಯಮಂಗಲ ನಿವಾಸಿಯಾಗಿದ್ದ ಮಂಜುಪ್ರಸಾದ್ ಉನ್ನತ ಶಿಕ್ಷಣ ಪಡೆದ ಪ್ರತಿಭಾವಂತ ಯುವಕರಾಗಿದ್ದರು. ಎಂಟೆಕ್ ಪದವಿ ಪೂರ್ಣಗೊಳಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸರ್ಕಾರಿ ಸೇವೆಯಲ್ಲಿ ಸೇರಬೇಕೆಂಬ ತಾಯಿಯ ಕನಸನ್ನು ನನಸು ಮಾಡುವ ದೃಢ ಸಂಕಲ್ಪ ಹೊಂದಿದ್ದ ಅವರು ನಿರಂತರ ಪರಿಶ್ರಮದ ಮೂಲಕ ಸುಮಾರು ಮೂರು ವರ್ಷಗಳ ಹಿಂದೆ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ನೇಮಕಗೊಂಡಿದ್ದರು. ಪ್ರಸ್ತುತ ಪಾವಗಡ ವಿಭಾಗದಲ್ಲಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕುಟುಂಬದವರ ಪ್ರಕಾರ, ಮಂಜುಪ್ರಸಾದ್ ಅವರಿಗೆ ತಮ್ಮ ತಾಯಿ ಮೇಲಿದ್ದ ಪ್ರೀತಿ ಅಪಾರವಾಗಿತ್ತು. ಸರ್ಕಾರಿ ಉದ್ಯೋಗ ಪಡೆದು ತಾಯಿಯನ್ನು ಸುಖವಾಗಿ ನೋಡಿಕೊಳ್ಳಬೇಕು, ಆಕೆಗೆ ಉತ್ತಮ ಜೀವನ ನೀಡಬೇಕು ಎಂಬ ಕನಸುಗಳನ್ನು ಅವರು ಕಂಡಿದ್ದರು. ಆದರೆ ವಿಧಿಯಾಟದಿಂದ ಅನಾರೋಗ್ಯದ ಕಾರಣ ತಾಯಿ ಮೃತಪಟ್ಟಿದ್ದು, ಆ ಘಟನೆ ಮಂಜುಪ್ರಸಾದ್ ಅವರನ್ನು ಮಾನಸಿಕವಾಗಿ ಸಂಪೂರ್ಣ ಕುಗ್ಗಿಸಿತ್ತು.
ತಾಯಿಯ ನಿಧನದ ನಂತರ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ತಾಯಿಯ ಮೇಲಿನ ಪ್ರೀತಿ ಮತ್ತು ಬಾಂಧವ್ಯ ಎಷ್ಟಿತ್ತು ಎಂದರೆ, ಮನೆಯ ಮುಂಭಾಗದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ತಾಯಿಯ ಸಮಾಧಿಯನ್ನು ನೋಡುತ್ತಿದ್ದರು ಎನ್ನಲಾಗಿದೆ. ಆಕೆಯ ನೆನಪಿನಿಂದ ಹೊರಬರಲು ಸಾಧ್ಯವಾಗದೆ ದಿನದಿಂದ ದಿನಕ್ಕೆ ಮೌನಿಯಾಗುತ್ತಿದ್ದರು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.

ಇದೀಗ ಕೇವಲ 20 ದಿನಗಳ ಹಿಂದಷ್ಟೇ ಮಂಜುಪ್ರಸಾದ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿನ ಜನನದಿಂದ ಅವರು ಮತ್ತೆ ಸಹಜ ಜೀವನಕ್ಕೆ ಮರಳುತ್ತಾರೆ ಎಂಬ ನಿರೀಕ್ಷೆ ಕುಟುಂಬದಲ್ಲಿತ್ತು. ಮಗುವನ್ನು ನೋಡಿ ಸಂತೋಷಗೊಂಡಿದ್ದ ಮಂಜುಪ್ರಸಾದ್, ತನ್ನ ತಾಯಿಯನ್ನೇ ಆ ಪುಟ್ಟ ಮಗುವಿನಲ್ಲಿ ಕಾಣಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ, ತಾಯಿಯ ಹೆಸರನ್ನೇ ಮಗುವಿಗೆ ಕರೆಯುವಷ್ಟು ಭಾವನಾತ್ಮಕವಾಗಿ ಮಗುವಿಗೆ ಅಂಟಿಕೊಂಡಿದ್ದರು ಎಂದು ಬಂಧುಗಳು ತಿಳಿಸಿದ್ದಾರೆ.
ಮೊನ್ನೆಯಷ್ಟೇ ದೇವಸ್ಥಾನಕ್ಕೆ ತೆರಳಿ ದೇವರಿಗೆ ಮುಡಿ ಕೊಟ್ಟು ಬಂದಿದ್ದ ಮಂಜುಪ್ರಸಾದ್, ಬಳಿಕ ಪತ್ನಿಯ ತವರೂರು ಕೊರಟಗೆರೆಗೆ ಭೇಟಿ ನೀಡಿದ್ದರು. ಅಲ್ಲಿಂದ “ಕೆಲಸದ ನಿಮಿತ್ತ ಹೋಗಿ ಬರುತ್ತೇನೆ” ಎಂದು ಹೇಳಿ ಹೊರಟಿದ್ದರು. ಆದರೆ ನಂತರ ದೇವರಾಯನದುರ್ಗ ಬೆಟ್ಟಕ್ಕೆ ತೆರಳಿ ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬಕ್ಕೆ ಆಘಾತ ಉಂಟುಮಾಡಿದೆ.
ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಸುಖ ಜೀವನ ನಡೆಸುತ್ತಿದ್ದರು. ಇದೀಗ 20 ದಿನಗಳ ಪುಟ್ಟ ಮಗುವಿನೊಂದಿಗೆ ಪತ್ನಿ ದಿಕ್ಕುತೋಚದ ಸ್ಥಿತಿಗೆ ತಲುಪಿದ್ದಾರೆ. ತಂದೆಯ ಮುದ್ದನ್ನೇ ಅರಿಯದ ವಯಸ್ಸಿನಲ್ಲೇ ಮಗುವಿಗೆ ತಂದೆ ಕಳೆದುಹೋಗಿರುವುದು ಕುಟುಂಬದ ನೋವನ್ನು ಇನ್ನಷ್ಟು ಹೆಚ್ಚಿಸಿದೆ.

ಸಂಬಂಧಿಕರ ಮಾಹಿತಿ ಪ್ರಕಾರ, ಮಂಜುಪ್ರಸಾದ್ ಈ ಹಿಂದೆಯೂ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಎರಡು ತಿಂಗಳ ಹಿಂದಷ್ಟೇ ಹುಬ್ಬಳ್ಳಿಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದರೆಂಬ ಮಾಹಿತಿ ಕೂಡ ಹೊರಬಂದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ವೈದ್ಯರಿಂದ ಚಿಕಿತ್ಸೆ ಸಹ ಪಡೆಯುತ್ತಿದ್ದರು. ಆದರೆ ತಾಯಿಯ ಅಗಲಿಕೆಯ ನೋವಿನಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಿರಲಿಲ್ಲ ಎಂದು ಆಪ್ತರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮಂಜುಪ್ರಸಾದ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರ ಕಣ್ಣೀರು ಒಣಗದಂತಾಗಿದ್ದು, ಸ್ನೇಹಿತರು ಮತ್ತು ಸಹೋದ್ಯೋಗಿಗಳೂ ದುಃಖದಲ್ಲಿ ಮುಳುಗಿದ್ದಾರೆ.
