ಕೇರಳ: ಕೇರಳದಿಂದ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ ಪಲರುವಿ ಎಕ್ಸ್ಪ್ರೆಸ್ ರೈಲಿನಲ್ಲಿ ಆರು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಶಾಕ್ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಕೇರಳದ ಕೊಲ್ಲಂ ಮೂಲದ 40 ವರ್ಷದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದು, ಪ್ರಕರಣವು ಪ್ರಯಾಣಿಕರಲ್ಲೂ ತೀವ್ರ ಆತಂಕ ಮೂಡಿಸಿದೆ.
ಮೂಲತಃ ತಮಿಳುನಾಡಿನ ತೆಂಕಾಸಿ ಭಾಗದ ನಿವಾಸಿಯಾಗಿರುವ ಬಾಲಕಿ, ತನ್ನ ಅಜ್ಜನೊಂದಿಗೆ ಕೇರಳದ ಪ್ರಸಿದ್ಧ ಎಡತುವಾ ಚರ್ಚ್ಗೆ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ತೆರಳಿದ್ದಳು. ಚರ್ಚ್ನಲ್ಲಿ ಪೂಜೆ ಹಾಗೂ ಪ್ರಾರ್ಥನೆ ಮುಗಿಸಿಕೊಂಡು, ಗುರುವಾರ ಮುಂಜಾನೆ ಇಬ್ಬರೂ ಪಲರುವಿ ಎಕ್ಸ್ಪ್ರೆಸ್ ರೈಲಿನಲ್ಲಿ ತಮ್ಮ ಊರಿಗೆ ವಾಪಸ್ ಪ್ರಯಾಣ ಆರಂಭಿಸಿದ್ದರು. ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಹೆಚ್ಚಿನ ಜನಸಂದಣಿ ನಡುವೆ ಬಾಲಕಿ ತನ್ನ ಅಜ್ಜನ ಪಕ್ಕದಲ್ಲೇ ಮಲಗಿದ್ದಳು.
ಈ ವೇಳೆ ಬಾಲಕಿ ನಿದ್ರಿಸುತ್ತಿರುವುದನ್ನು ಗಮನಿಸಿದ ಆರೋಪಿ, ಅಜ್ಜನ ಗಮನ ತಪ್ಪಿಸಿ ಆಕೆಯನ್ನು ಎತ್ತಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಬಳಿಕ ತನ್ನ ಸೀಟಿನ ಮೇಲೆ ಮಲಗಿಸಿಕೊಂಡು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯ ಈ ಅಮಾನುಷ ಕೃತ್ಯವನ್ನು ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗಮನಿಸಿದ್ದು, ತಕ್ಷಣವೇ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.
ಮಹಿಳೆ ಆರೋಪಿಯ ವರ್ತನೆ ಗಮನಿಸಿ ಜೋರಾಗಿ ಕಿರುಚಾಡಿ ಇತರ ಪ್ರಯಾಣಿಕರನ್ನು ಎಚ್ಚರಿಸಿದ್ದಾರೆ. ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದು, ಗದ್ದಲ ಉಂಟಾಗಿದೆ. ಅಷ್ಟರಲ್ಲೇ ರೈಲು ಕೇರಳ ಗಡಿ ದಾಟಿ ತಮಿಳುನಾಡು ಪ್ರದೇಶ ಪ್ರವೇಶಿಸಿತ್ತು. ಪರಿಸ್ಥಿತಿ ತೀವ್ರವಾಗುತ್ತಿರುವುದನ್ನು ಅರಿತ ಆರೋಪಿ, ಸೆಂಗೊಟ್ಟೈ ರೈಲು ನಿಲ್ದಾಣ ತಲುಪುತ್ತಿದ್ದಂತೆಯೇ ರೈಲಿನಿಂದ ಇಳಿದು ಪರಾರಿಯಾಗಿದ್ದಾನೆ.
ಈ ಘಟನೆ ಬಳಿಕ ರೈಲಿನಲ್ಲಿದ್ದ ಮಹಿಳೆ ತೆಗೆದ ವಿಡಿಯೋ ದೃಶ್ಯಗಳು ಮತ್ತು ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪುನಲೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ರೈಲಿನ ಸಿಸಿಟಿವಿ ಮಾಹಿತಿ, ಪ್ರಯಾಣಿಕರ ಹೇಳಿಕೆ ಹಾಗೂ ವಿಡಿಯೋ ಸಾಕ್ಷ್ಯಗಳ ನೆರವಿನಿಂದ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು, ಕೊಲ್ಲಂ ಭಾಗದಲ್ಲಿ ಬಂಧಿಸಿದ್ದಾರೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಹೇಳಿಕೆಯನ್ನು ಮಕ್ಕಳ ಸ್ನೇಹಿ ವಾತಾವರಣದಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ರೈಲು ಪ್ರಯಾಣದ ವೇಳೆ ನಡೆದ ಈ ಘಟನೆ ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಮಕ್ಕಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ. ವಿಶೇಷವಾಗಿ ಜನರಲ್ ಬೋಗಿಗಳಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
