ನೆಲಮಂಗಲದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಹತ್ಯೆ: ಆರೋಪಿ ಬಂಧನ

ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ನಿಜಗಲ್ ಗ್ರಾಮದಲ್ಲಿ ಪತ್ತೆಯಾಗಿದ್ದ ಮಹಿಳೆಯ ಕಳೆಬರ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ನಾಪತ್ತೆಯಾಗಿದ್ದ ಮಹಿಳೆ ಕೊಲೆಗೀಡಾಗಿರುವುದು ದೃಢಪಟ್ಟಿದ್ದು, ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ತಿಂಗಳ 16ನೇ ತಾರೀಖು ಹಳೆ ನಿಜಗಲ್ ಪ್ರದೇಶದಲ್ಲಿ ಮಹಿಳೆಯ ಕಳೆಬರ ಪತ್ತೆಯಾಗಿತ್ತು. ಮಾಹಿತಿ ಸಿಕ್ಕ ತಕ್ಷಣ ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆ ಮುಂದುವರಿದಂತೆ, ಪತ್ತೆಯಾದ ಕಳೆಬರವು 39 ವರ್ಷದ ಯಮುನಾ ಎಂಬ ಮಹಿಳೆಯದ್ದು ಎಂದು ತಿಳಿದುಬಂದಿದೆ. ಯಮುನಾ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತೀವ್ರ ತನಿಖೆ ವೇಳೆ, 20ನೇ ತಾರೀಖಿನ ಸಿಸಿಟಿವಿ ದೃಶ್ಯಗಳಲ್ಲಿ ಯಮುನಾ ರಾಘವೇಂದ್ರ ಎಂಬಾತನೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಪತ್ತೆಯಾಯಿತು. ಈ ಸುಳಿವನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಆರೋಪಿ ರಾಘವೇಂದ್ರ, ಯಮುನಾ ತನ್ನ ಜೊತೆ ಸುಮಾರು ಐದು ವರ್ಷಗಳ ಕಾಲ ವಾಸವಾಗಿದ್ದಳು ಎಂದು ಹೇಳಿದ್ದಾನೆ. ನಂತರ ಆಕೆ ದೂರವಾಗಿದ್ದರಿಂದ ಮತ್ತೆ ತನ್ನ ಜೊತೆ ಬಾ ಎಂದು ಕೇಳಿದಾಗ, ಆಕೆ ನಿರಾಕರಿಸಿದ್ದಳು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳ ಉಂಟಾಗಿತ್ತು.

ಜಗಳ ತೀವ್ರಗೊಂಡ ಸಂದರ್ಭದಲ್ಲಿ ಆಕ್ರೋಶಗೊಂಡ ರಾಘವೇಂದ್ರ, ಯಮುನಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಈ ಹಿನ್ನೆಲೆ ದಾಬಸ್ ಪೇಟೆ ಪೊಲೀಸರು ಆರೋಪಿ ರಾಘವೇಂದ್ರನನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

Spread the love

Leave a Reply

Your email address will not be published. Required fields are marked *