ಯಮುನಾ (38) ಮೃತ ಮಹಿಳೆ ಎಂದು ಗುರುತು ಪತ್ತೆ
ನೆಲಮಂಗಲ: ನಾಪತ್ತೆಯಾಗಿದ್ದ ಮಹಿಳೆಯೊಬ್ಬಳ ಅಸ್ಥಿಪಂಜರ ಪತ್ತೆಯಾದ ಘಟನೆ ದಾಬಸ್ ಪೇಟೆ ಹಳೆ ನಿಜಗಲ್ ಸಮೀಪದ ಜಮೀನಿನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಪ್ರದೇಶದಲ್ಲಿ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ.
ಮೃತರನ್ನು ಯಮುನಾ (38) ಎಂದು ಗುರುತಿಸಲಾಗಿದೆ. ಮಾರ್ಚ್ 21ರಿಂದ ಯಮುನಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಅವರ ಪತಿ ಮಲ್ಲಿಕಾರ್ಜುನ ಅವರು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದರು.
ಈ ನಡುವೆ, ದಾಬಸ್ ಪೇಟೆ ಹಳೆ ನಿಜಗಲ್ ಬಳಿ ಇರುವ ಜಮೀನಿನಲ್ಲಿ ಅಸ್ಥಿಪಂಜರ, ತಲೆಬುರುಡೆ ಹಾಗೂ ಒಂದು ಬ್ಯಾಗ್ ಪತ್ತೆಯಾಗಿದೆ. ಸ್ಥಳೀಯರು ಇದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಯಮುನಾ ಅವರದ್ದೇ ಆಗಿರುವ ಸಾಧ್ಯತೆ ವ್ಯಕ್ತವಾಗಿದೆ. ಯಮುನಾ ಅವರು ನಂದಿಹಳ್ಳಿ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಎಂಬುವವರೊಂದಿಗೆ ವಿವಾಹವಾಗಿದ್ದರು. ದಂಪತಿಗಳಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ.

ಇದೇ ವೇಳೆ, ಯಮುನಾ ಅವರು ರಾಘವೇಂದ್ರ ಎಂಬುವವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಹಿನ್ನಲೆ ಇನ್ನಷ್ಟು ಗಂಭೀರವಾಗಿದ್ದು, ಪೊಲೀಸರು ವಿವಿಧ ಕೋಣಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಸ್ಥಳದಲ್ಲಿ ಪತ್ತೆಯಾದ ತಲೆಬುರುಡೆ ಮತ್ತು ಇತರೆ ಅವಶೇಷಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗಿದ್ದು, ಡಿಎನ್ಎ ಪರೀಕ್ಷೆಯ ಮೂಲಕ ಗುರುತು ದೃಢಪಡಿಸುವ ಕಾರ್ಯ ನಡೆಯಲಿದೆ.
ಸದ್ಯ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಯಮುನಾ ನಾಪತ್ತೆಯ ಹಿಂದೆ ಇರುವ ನಿಜಾಂಶ ಹಾಗೂ ಕೊಲೆಯ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
