ನೆಲಮಂಗಲ: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆಯಾದ ಘಟನೆ ತಾಲೂಕಿನ ಮೋಟಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯ ಒಳಗಿನ ಕೋಣೆಯಲ್ಲಿ ಇರುವ ಪ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೃತರನ್ನು ಜೀವಿತಾ (35) ಎಂದು ಗುರುತಿಸಲಾಗಿದೆ. ಸುಮಾರು ಆರು ವರ್ಷಗಳ ಹಿಂದೆ ವಿನಯ್ ಕುಮಾರ್ ಎಂಬುವವರೊಂದಿಗೆ ಜೀವಿತಾ ವಿವಾಹವಾಗಿದ್ದು, ಕುಟುಂಬಸ್ಥರ ಮಾಹಿತಿಯ ಪ್ರಕಾರ ವಿನಯ್ ಕುಮಾರ್ ಅವರಿಗೆ ಮೊದಲ ಪತ್ನಿ ಇಲ್ಲದ ಹಿನ್ನೆಲೆ ಎರಡನೇ ಮದುವೆ ಮಾಡಲಾಗಿತ್ತು. ದಂಪತಿಗೆ ಒಂದುವರೆ ವರ್ಷದ ಮಗು ಸಹ ಇದೆ.

ಆದರೆ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕೊರತೆಯಿಂದಾಗಿ ಇಬ್ಬರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಗಂಡನಿಂದ ನಿರಂತರ ಕಿರುಕುಳ ಹಾಗೂ ಇಲ್ಲಸಲ್ಲ ಆರೋಪಗಳು ಕೇಳಿಬರುತ್ತಿದ್ದವು ಎಂದು ಜೀವಿತಾ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆ ಮಾನಸಿಕ ಒತ್ತಡದಿಂದ ಜೀವಿತಾ ಈ ದುರಂತ ನಿರ್ಧಾರಕ್ಕೆ ಕೈ ಹಾಕಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
