ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಒಂದರಲ್ಲಿ ಆರುವರೆ ತಿಂಗಳ ಪುಟ್ಟ ಮಗು ದುರ್ಮರಣ ಹೊಂದಿದೆ. ಮನೆಯ ಮುಂದೆ ಪೂಜೆಯ ಸಲುವಾಗಿ ಇಡಲಾಗಿದ್ದ ಒಣಗಿದ ದಾಸವಾಳ ಹೂವನ್ನು ಆಟವಾಡುತ್ತಿದ್ದ ಮಗು ಚಿನ್ಮಯಿಗೌಡ ಅಜಾಗರೂಕತೆಯಿಂದ ನುಂಗಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಮಗುವಿಗೆ ತಕ್ಷಣವೇ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೋಷಕರು ತಡಮಾಡದೆ ಮಗುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ತಕ್ಷಣ ಚಿಕಿತ್ಸೆ ನೀಡಲು ಮುಂದಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ನಂತರ ವೈದ್ಯಕೀಯ ಪರಿಶೀಲನೆ ವೇಳೆ ಮಗುವಿನ ಗಂಟಲಿನಲ್ಲಿ ಒಣಗಿದ ದಾಸವಾಳ ಹೂವು ಸಿಲುಕಿಕೊಂಡಿದ್ದು, ಅದರಿಂದ ಉಸಿರುಗಟ್ಟುವಿಕೆ ಉಂಟಾಗಿ ಸಾವಿಗೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ಈ ದುರಂತ ಘಟನೆ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.
