ಚಲಿಸುವ ರೈಲಿಗೆ ತಲೆಕೊಟ್ಟು ಯುವತಿ ಸಾವು; ಸ್ಥಳದಲ್ಲೇ 2 ಡೆತ್‌ನೋಟ್ ಪತ್ತೆ

ಚಲಿಸುವ ರೈಲಿಗೆ ತಲೆಕೊಟ್ಟು ಯುವತಿ ಸಾವು; ಸ್ಥಳದಲ್ಲೇ 2 ಡೆತ್‌ನೋಟ್ ಪತ್ತೆ

ಧಾರವಾಡ ನಗರದ ಕ್ಯಾರಕೊಪ್ಪ ರೈಲ್ವೆ ಗೇಟ್ ಸಮೀಪ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಈ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ದುಃಖವನ್ನುಂಟುಮಾಡಿದೆ. ಬಳ್ಳಾರಿ ಜಿಲ್ಲೆಯ ಮೂಲದ ಪಲ್ಲವಿ (24) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಉದ್ದೇಶದಿಂದ ಧಾರವಾಡಕ್ಕೆ ಬಂದಿದ್ದಳು ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದರು. ಆರಂಭದಲ್ಲಿ ಯುವತಿಯ ಸಾವಿನ ಕುರಿತು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದ್ದು, ಈ ವೇಳೆ ಮೃತ ಯುವತಿಯ ಪ್ಯಾಂಟ್ ಕಿಸೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಇದರಿಂದಾಗಿ ಆತ್ಮಹತ್ಯೆಗೆ ಕಾರಣಗಳ ಬಗ್ಗೆ ಸ್ಪಷ್ಟತೆ ದೊರೆತಿದೆ.

ಎರಡು ಡೆತ್ ನೋಟ್ ಪತ್ತೆ

ಮೃತ ಪಲ್ಲವಿಯ ಪ್ಯಾಂಟ್ ಕಿಸೆಯಲ್ಲಿ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಆಕೆ ತನ್ನ ತಂದೆ-ತಾಯಿಯ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿದೆ. “ನನಗೆ ನೀವು ಯಾವತ್ತೂ ಪ್ರೀತಿ ನೀಡಿಲ್ಲ. ಹಾಸ್ಟೆಲ್‌ನಲ್ಲೇ ನನ್ನನ್ನು ಬೆಳೆಸಿದ್ದೀರಿ. ನನ್ನ ಬೇಕು ಮತ್ತು ಬೇಡಗಳನ್ನು ನೀವು ಕೇಳದೇ ನಡೆದುಕೊಂಡಿದ್ದರಿಂದ ನಾನು ಮನಸ್ಸಿನಲ್ಲಿ ತುಂಬಾ ನೋವು ಅನುಭವಿಸಿದ್ದೇನೆ” ಎಂದು ಆಕೆ ಬರೆದಿರುವುದು ತಿಳಿದುಬಂದಿದೆ.

ಇದಲ್ಲದೆ, ಮತ್ತೊಂದು ಡೆತ್ ನೋಟ್ ಪಲ್ಲವಿಯು ವಾಸವಿದ್ದ ಕೊಠಡಿಯಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಆಕೆ ತಾನು ಪ್ರೀತಿಸುತ್ತಿದ್ದ ಯುವಕನ ಬಳಿ ಕ್ಷಮೆ ಯಾಚಿಸಿದ್ದಾಳೆ. “ನಮ್ಮ ಮನೆಯವರು ನಿನ್ನೊಂದಿಗೆ ಬದುಕಲು ಅವಕಾಶ ಕೊಡಲಿಲ್ಲ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನ್ನನ್ನು ನೀನು ಕ್ಷಮಿಸು. ನನ್ನ ಈ ಸಾವಿಗೆ ನಾನೇ ಕಾರಣ” ಎಂದು ಪಲ್ಲವಿ ಸ್ಪಷ್ಟವಾಗಿ ಉಲ್ಲೇಖಿಸಿರುವುದು ಕಂಡುಬಂದಿದೆ.

https://www.facebook.com/reel/865985536078196

ಪಲ್ಲವಿ ಮತ್ತು ಬಳ್ಳಾರಿ ತಾಲೂಕಿನ ದಮ್ಮೂರು ಕಗ್ಗಲ್ಲು ಗ್ರಾಮದ ನಿವಾಸಿ ಯುವಕನ ನಡುವೆ ಪ್ರೇಮ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಷಯವನ್ನು ಪಲ್ಲವಿ ತನ್ನ ಮನೆಯವರ ಮುಂದೆ ಪ್ರಸ್ತಾಪಿಸಿದ್ದಳು. ಆದರೆ ಕುಟುಂಬದವರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರೊಂದಿಗೆ, ತಾಯಿಯ ಸಂಬಂಧಿಕರೊಬ್ಬರೊಂದಿಗೆ ಪಲ್ಲವಿಯ ಮದುವೆಯನ್ನು ನಿಶ್ಚಯಿಸುವ ಪ್ರಯತ್ನವೂ ನಡೆದಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಪಲ್ಲವಿ ಮಾನಸಿಕವಾಗಿ ಬಹಳಷ್ಟು ನೊಂದಿದ್ದಳು ಎಂಬ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

‘ಅಪಪ್ರಚಾರ ಮಾಡಿದ್ರೆ ಕಠಿಣ ಕ್ರಮ’

ಈ ಘಟನೆಗೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯುವತಿ ವೈಯಕ್ತಿಕ ಕಾರಣಗಳಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣಕ್ಕೆ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ರೀತಿಯಲ್ಲಿ ಅಪಪ್ರಚಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಪಲ್ಲವಿ ಸಾವಿಗೂ ಉದ್ಯೋಗ ಅಥವಾ ನೇಮಕಾತಿ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದು, ಮೃತ ಯುವತಿಯ ಜೇಬಿನಲ್ಲಿ ಪತ್ತೆಯಾದ ಎರಡು ಡೆತ್ ನೋಟ್‌ಗಳಲ್ಲೂ ಆತ್ಮಹತ್ಯೆಗೆ ವೈಯಕ್ತಿಕ ಕಾರಣಗಳೇ ಕಾರಣವೆಂದು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಅವರು, ಯುವತಿಯ ಆತ್ಮಹತ್ಯೆಗೆ ಅನಾವಶ್ಯಕವಾಗಿ ಬೇರೆ ಬಣ್ಣ ಕಟ್ಟುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *