ನೆಲಮಂಗಲದಲ್ಲಿ ನಡೆದಿರುವ ರಿಹ್ಯಾಬ್ ಸೆಂಟರ್ಗಳ ಬಗ್ಗೆ ಮತ್ತೊಂದು ಚಿಂತೆ ಹುಟ್ಟಿಸುವ ಘಟನೆ ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಬಳಿ ಕಾರ್ಯನಿರ್ವಹಿಸುತ್ತಿರುವ ಅಮ್ಮೂಸ್ ರಿಹ್ಯಾಬ್ ಸೆಂಟರ್ನಲ್ಲಿ ಮತ್ತೊಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ಉದ್ಭವಿಸಿದೆ. ನಾಲ್ಕು ದಿನಗಳ ಹಿಂದೆ ಕುಟುಂಬದವರು ಇಲ್ಲಿ ದಾಖಲಿಸಿದ ಕೇರಳ ಮೂಲದ 42 ವರ್ಷದ ಮನೀಶ್ ಕೆ.ಜೆ. ಅವರು ನಿನ್ನೆ ಜೀವ ಕಳೆದುಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೀಶ್ ಅವರನ್ನು ಕೈ–ಕಾಲು ಕಟ್ಟಿರುವ ದೃಶ್ಯಗಳು ಹಾಗೂ ಚಿತ್ರಹಿಂಸೆಗೆ ಒಳಗಾಗಿರುವಂತೆ ಕಾಣುವ ಸಿಸಿಟಿವಿ ದೃಶ್ಯಗಳು ಸಿಕ್ಕಿರುವುದಾಗಿ ಹೇಳಲಾಗಿದೆ. ಈ ದೃಶ್ಯಗಳು ಈಗ ಪೊಲೀಸರು ಮತ್ತು ತನಿಖಾಧಿಕಾರಿಗಳ ಗಮನ ಸೆಳೆದಿವೆ. ಇತ್ತೀಚೆಗಷ್ಟೇ ಇದೇ ರಿಹ್ಯಾಬ್ ಸೆಂಟರ್ನಲ್ಲಿ ಒಬ್ಬ ಯುವಕ ಸಾವನ್ನಪ್ಪಿದ ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿತ್ತು. ಈ ಹಿನ್ನೆಲೆ ಮತ್ತೊಂದು ಸಾವು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಮನೀಶ್ ಅವರು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿರುವುದರಿಂದ, ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಗಾರಕ್ಕೆ ಕಳುಹಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಹೊರಬಿದ್ದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ರಿಹ್ಯಾಬ್ ಸೆಂಟರ್ಗಳಲ್ಲಿ ನಡೆಯುತ್ತಿರುವ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಮತ್ತು ನೈತಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕುಟುಂಬದವರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು, ಪೊಲೀಸರು ಸೂಕ್ಷ್ಮವಾಗಿ ತನಿಖೆ ಮುಂದುವರೆಸುತ್ತಿದ್ದಾರೆ.
