ನೆಲಮಂಗಲ: ನಿವೃತ್ತ ಡಿವೈಎಸ್ಪಿ ಗೋವಿಂದರಾಜ್ ಅವರ ಪುತ್ರಿ ಅನಿತಾ ಅವರಿಗೆ ಪತಿ ಮತ್ತು ಮಾವ-ಅತ್ತೆಯರಿಂದ ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ಹೊರಬಿದ್ದಿದ್ದು, ಈ ಘಟನೆ ನೆಲಮಂಗಲ ತಾಲ್ಲೂಕಿನ ತಿಮ್ಮಪ್ಪನಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ಇದರಿಂದಾಗಿ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿರುವ ಪ್ರಕರಣ ಇದೀಗ ಪೊಲೀಸರ ತನಿಖೆಗೆ ಒಳಪಟ್ಟಿದೆ.
ಅನಿತಾ ಮತ್ತು ವೈದ್ಯರಾಗಿರುವ ಡಾ. ಗೋವರ್ಧನರ ಮದುವೆ 2023ರ ನವೆಂಬರ್ 2ರಂದು ಅದ್ದೂರಿ ವೈಭವದಲ್ಲಿ ನಡೆದಿತ್ತು. ಮಗಳ ವಿವಾಹಕ್ಕಾಗಿ ನಿವೃತ್ತ ಪೊಲೀಸ್ ಅಧಿಕಾರಿ ಗೋವಿಂದರಾಜ್ ಲಕ್ಷಾಂತರ ರೂಪಾಯಿ ಖರ್ಚುಮಾಡಿ, ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ನೀಡಿ, ಸಮಾರಂಭವನ್ನು ವೈಭವಶಾಲಿಯಾಗಿ ನೆರವೇರಿಸಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಆದರೆ ಮದುವೆಯಾದ ಕೇವಲ 15 ದಿನಗಳಲ್ಲೇ ಅನಿತಾ ತಮ್ಮ ಪತಿ ಮತ್ತು ಮಗಳ ಮನೆಯವರಿಂದ ಕಿರುಕುಳ ಅನುಭವಿಸಬೇಕಾಯಿತು ಎಂಬುದು ಆಕೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.
ಮದುವೆಯ ಕೆಲವೇ ದಿನಗಳಲ್ಲಿ ಪತಿ ಡಾ. ಗೋವರ್ಧನ ತಮ್ಮ ಸರ್ಕಾರಿ ಸೇವೆಯನ್ನು ಬಿಟ್ಟು ನರ್ಸಿಂಗ್ ಹೋಮ್ ತೆರೆಯುವ ಯೋಚನೆ ವ್ಯಕ್ತಪಡಿಸಿದ್ದಾರಂತೆ. ಇದಕ್ಕಾಗಿ ಅನಿತಾ ತಂದೆಯ ಆಸ್ತಿಯನ್ನು ತನ್ನ ಹೆಸರಿನಲ್ಲಿ ಬರೆಸಿಕೊಳ್ಳುವಂತೆ ಡಾ. ಗೋವರ್ಧನ ಒತ್ತಾಯ ಮಾಡುತ್ತಿದ್ದರೆಂದು ಅನಿತಾ ದೂರಿನಲ್ಲಿ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ದಾಂಪತ್ಯದಲ್ಲಿ ವಾತಾವರಣ ಹದಗೆಟ್ಟಿದ್ದು, ಅನಿತಾದ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಿತ್ತಂತೆ.
ಇದೇ ವೇಳೆ ಪತಿಯ ಮಾವ ಪ್ರೊ. ನಾಗರಾಜು ಕೂಡ ಅನಿತಾಗೆ ಬೇಜವಾಬ್ದಾರಿಯ ಮಾತುಗಳಿಂದ ಹಾಗೂ ನಡೆ-ನುಡಿಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. ಮದುವೆಯಾಗಿ ಹಲವು ವರ್ಷವಾಗಿದ್ದರೂ ದಂಪತಿಗೆ ಮಗುವಾಗದಿರುವ ಹಿನ್ನೆಲೆಯಲ್ಲಿ, ಪ್ರೊ. ನಾಗರಾಜು ಅನಿತಾಗೆ ದೂರವಾಣಿ ಮೂಲಕ ಲೈಂಗಿಕವಾಗಿ ಅಸಭ್ಯ ಹಾಗೂ ನೋವುಂಟುಮಾಡುವಂತಹ ಕಾಮೆಂಟ್ ಮಾಡಿದ್ದಾಗಿ ಉಲ್ಲೇಖಿಸಲಾಗಿದೆ. “ನನ್ನ ಮಗ ನಿನಗೆ ಲೈಂಗಿಕ ಕ್ರಿಯೆ ನಡೆಸಿದ್ದಾನಾ ಇಲ್ಲವಾ? ಇಲ್ಲ ಅಂದರೆ ನಾನು ಬರುತ್ತೇನೆ” ಎಂದು ಅನಿತಾಗೆ ಹೇಳಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲದೇ, ಮಾವ ಮನೆಗೆ ಬಂದಾಗ ಸೊಸೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರೆಂದು, “ಈ ಕಾಲದ ಹುಡುಗಿಯರಂತೆ ತುಂಡು ಬಟ್ಟೆ ಧರಿಸಬೇಕು” ಎಂಬ ರೀತಿಯಲ್ಲಿ ಅಸಂಗತ ಮಾತುಗಳನ್ನು ಆಡುತ್ತಿದ್ದರೆಂದು ಅನಿತಾ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅನಿತಾ ತಮ್ಮ ಅತ್ತೆ ಮತ್ತು ಗಂಡನಿಗೆ ತಿಳಿಸಿದಾಗ ಕೂಡ ಅವರು “ಒಂದೇ ಕುಟುಂಬದವರು… ಇಂಥದ್ದು ಆಗುತ್ತೆ, ಹೇಗಾದರೂ ಸಹಿಸಿಕೊಂಡು ಹೋಗು” ಎಂದು ನಿರ್ಲಕ್ಷ್ಯವಾಗಿ ಪ್ರತಿಕ್ರಿಯಿಸಿದರೆಂದು ದೂರಿನಲ್ಲಿ ಹೇಳಲಾಗಿದೆ.
ಈ ಎಲ್ಲ ಘಟನೆಗಳಿಂದ ಮನಸ್ಸಿಗೆ ದೊಡ್ಡ ಹೊಡೆತ ತಗುಲಿರುವ ಅನಿತಾ ಅಂತಿಮವಾಗಿ ನೆಲಮಂಗಲ ಪೊಲೀಸ್ ಠಾಣೆಗೆ ಧಾವಿಸಿ, ತಮ್ಮ ಪತಿ ಡಾ. ಗೋವರ್ಧನ, ಮಾವ ಪ್ರೊ. ನಾಗರಾಜ್ ಹಾಗೂ ಅತ್ತೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದಾರೆ. ಪೊಲೀಸರು BNS ಕಾನೂನುಗಳ ಸೆಕ್ಷನ್ 84, 74, 75 ಹಾಗೂ 352 BNS 3 & 4 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಈಗ ಪ್ರಕರಣ ಸಂಬಂಧ ನೆಲಮಂಗಲ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
