ತಿರುವನಂತಪುರಂ: 2 ವರ್ಷದ ಬಾಲಕಿ ಅಪಹರಣ–ಅತ್ಯಾಚಾರ ಪ್ರಕರಣದಲ್ಲಿ ಹಸನ್ ಕುಟ್ಟಿ ತಪ್ಪಿತಸ್ಥ
ತಿರುವನಂತಪುರಂ, ಸೆಪ್ಟೆಂಬರ್ 27 – ಕೇರಳದ ತಿರುವನಂತಪುರಂನಲ್ಲಿ ವಲಸೆ ಬಂದ ಅಲೆಮಾರಿ ದಂಪತಿಯ ಎರಡು ವರ್ಷದ ಮಗಳನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 45 ವರ್ಷದ ಕಬೀರ್ ಅಲಿಯಾಸ್ ಹಸನ್ ಕುಟ್ಟಿಯನ್ನು ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದೆ. ತಿರುವನಂತಪುರಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಪೋಕ್ಸೊ (POCSO) ನ್ಯಾಯಾಲಯವು ಈ ತೀರ್ಪು ನೀಡಿದ್ದು, ಶಿಕ್ಷೆಯ ಅವಧಿಯನ್ನು ಅಕ್ಟೋಬರ್ 3ರಂದು ಪ್ರಕಟಿಸಲು ತೀರ್ಮಾನಿಸಿದೆ.
ಈ ಪ್ರಕರಣವು ಕಳೆದ ವರ್ಷ ಫೆಬ್ರವರಿ 19ರಂದು ನಡೆದಿತ್ತು. ಹೈದರಾಬಾದ್ನಿಂದ ಜೇನುತುಪ್ಪ ಮಾರಾಟ ಮಾಡಲು ಕೇರಳಕ್ಕೆ ಬಂದಿದ್ದ ಅಲೆಮಾರಿ ದಂಪತಿ ತಮ್ಮ ಎರಡು ವರ್ಷದ ಮಗಳೊಂದಿಗೆ ಚಕ್ಕಾ ಪ್ರದೇಶದ ರಸ್ತೆಬದಿಯಲ್ಲಿ ಮಲಗಿದ್ದರು. ಇದೇ ಸಂದರ್ಭದಲ್ಲಿ ಹಸನ್ ಕುಟ್ಟಿ ಮಗುಳನ್ನು ಅಪಹರಿಸಿ, ಬ್ರಹ್ಮೋಸ್ ಏರೋಸ್ಪೇಸ್ನ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿ ಮಗುವನ್ನು ಅಲ್ಲಿ ಬಿಟ್ಟು ಆತ ಸ್ಥಳದಿಂದ ಪರಾರಿಯಾಗಿದ್ದ.
ಮಗು ಕಾಣೆಯಾದ ನಂತರ ಪೋಷಕರು ಪೊಲೀಸರಿಗೆ ದೂರು ದಾಖಲಿಸಿದರು. ದೂರು ದಾಖಲಾದ ಮರುದಿನ ಸಂಜೆ 7.30ರ ಸುಮಾರಿಗೆ ಬ್ರಹ್ಮೋಸ್ ಕಾಂಪೌಂಡ್ ಗೋಡೆಯ ಬಳಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾದಳು. ತಕ್ಷಣ ಆಕೆಯನ್ನು SAT ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ತುರ್ತು ಚಿಕಿತ್ಸೆ ನೀಡಿ ಆಕೆಯ ಪ್ರಾಣವನ್ನು ಉಳಿಸಲಾಯಿತು.
ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು ಪ್ರಮುಖ ಸುಳಿವಿಗಾಗಿ ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದರಲ್ಲಿ ಆರೋಪಿಯಾದ ಹಸನ್ ಕುಟ್ಟಿ ಮಗುವಿನೊಂದಿಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ತಿರುವು ನೀಡಿತು. ನಂತರ 13 ದಿನಗಳೊಳಗೆ ಕೊಲ್ಲಂನಲ್ಲಿ ಆತ ಬಂಧನಕ್ಕೊಳಗಾದ.
ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಜೊತೆಗೆ ಆರೋಪಿಯ ಬಟ್ಟೆಗಳಲ್ಲಿ ಪತ್ತೆಯಾದ ಕೂದಲಿನ ಮಾದರಿಗಳು ಮಗುವಿನ ಕೂದಲಿನ ಮಾದರಿಗಳೊಂದಿಗೆ ಹೊಂದಿಕೊಂಡಿದ್ದು, ಅಪರಾಧಕ್ಕೆ ಪಕ್ಕಾ ಸಾಕ್ಷಿಯಾಯಿತು. ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಲಾದ ಮಾದರಿಗಳು ಮತ್ತು ಆರೋಪಿಯ ಬಟ್ಟೆಗಳಲ್ಲಿ ಪತ್ತೆಯಾದ ಇತರ ಸಾಕ್ಷ್ಯಾಧಾರಗಳು ಕೂಡಾ ಆಕೆಯೊಂದಿಗೆ ಹೊಂದಿಕೆಯಾಗಿದ್ದವು ಎಂದು ಫರೆನ್ಸಿಕ್ ವರದಿ ದೃಢಪಡಿಸಿದೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿದ ಪೊಲೀಸರು ತಕ್ಷಣ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ (CWC) ನಿರ್ವಹಿಸುತ್ತಿದ್ದ ಆಶ್ರಯಕ್ಕೆ ಸ್ಥಳಾಂತರಿಸಿದರು. ಅಲ್ಲದೆ, ಈ ಪ್ರಕರಣದಲ್ಲಿ ಹಸನ್ ಕುಟ್ಟಿ ಮೊದಲ ಬಾರಿಗೆ ಆರೋಪಿಯಾಗಿರಲಿಲ್ಲ. ಆತ ಈ ಹಿಂದೆ ಕೂಡ ಪೋಕ್ಸೊ ಕೇಸ್ನಲ್ಲಿ ಆರೋಪಿ ಎಂಬ ದಾಖಲೆಯಿದ್ದು, ಇದೀಗ ಮತ್ತೊಮ್ಮೆ ಅಪರಾಧಿಯೆಂದು ತೀರ್ಪು ಹೊರಬಿದ್ದಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯವು ಹಸನ್ ಕುಟ್ಟಿಯನ್ನು ತಪ್ಪಿತಸ್ಥನೆಂದು ಘೋಷಿಸಿರುವುದರಿಂದ ಅಕ್ಟೋಬರ್ 3ರಂದು ಶಿಕ್ಷೆಯ ಅವಧಿ ನಿಗದಿಯಾಗಲಿದೆ.