ವರದಕ್ಷಿಣೆ ಹಣ ತರಲಿಲ್ಲ ಎಂದು ಪೋಟೋ ವೈರಲ್
ಬೆಂಗಳೂರು: ನಗರದಲ್ಲಿ ಅತೀ ನಾಚಿಕೆಗೇಡಿತನದ ಹಾಗೂ ಹೃದಯ ಕಲುಕುವಂತಹ ಘಟನೆ ಬೆಳಕಿಗೆ ಬಂದಿದೆ. ಪತ್ನಿಯನ್ನೇ ಕಿರುಕುಳ ನೀಡಿ ಅವಮಾನಿಸಲು ಪತಿಯೊಬ್ಬನು ನೇರವಾಗಿ ಸಾಮಾಜಿಕ ಜಾಲತಾಣವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ತನ್ನ ಕುಟುಂಬದಿಂದ ಕೋಟ್ಯಂತರ ರೂಪಾಯಿಗಳ ವರದಕ್ಷಿಣೆ ತರಿಸಿಕೊಡಬೇಕು ಎಂದು ಒತ್ತಡ ಹೇರಿದ ಪತಿ, ಬೇಡಿಕೆ ಈಡೇರದಿದ್ದಾಗ, ಪತ್ನಿಯ ಖಾಸಗಿ ಫೋಟೋಗಳನ್ನು ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಂಡು ಮಾನಸಿಕ ಹಿಂಸೆಗೊಳಪಡಿಸಿದ್ದಾನೆ.
ಹಿನ್ನಲೆ: ಈ ದಂಪತಿಗಳು ಮೂಲತಃ ರಾಜಸ್ಥಾನದ ಬಲೋತ್ರ ಜಿಲ್ಲೆಯಿಂದ ಬೆಂಗಳೂರಿಗೆ ಬಂದು ವಾಸವಾಗಿದ್ದಾರೆ. ಆತನ ಪತ್ನಿಯ ಕುಟುಂಬದಿಂದ ಹೆಚ್ಚಿನ ವರದಕ್ಷಿಣೆಯನ್ನು ಪಡೆದು, ತನ್ನ ವಂದೇಮಾತರಂ ಎಂಬ ಸ್ವಂತ ವ್ಯವಹಾರ ವಿಸ್ತರಿಸಬೇಕೆಂಬ ಪತಿಯ ಉದ್ದೇಶವಿತ್ತು. ಆರೋಪಿಯು ಅತೀ ಭಾರೀ ಮೊತ್ತವಾದ ₹4 ಕೋಟಿ ವರದಕ್ಷಿಣೆ ಪತ್ನಿಯ ಕುಟುಂಬದಿಂದ ತರಬೇಕೆಂದು ಒತ್ತಾಯಿಸಿದ್ದಾನೆ. ಆದರೆ, ಆಕೆಯ ಕುಟುಂಬವು ಆರ್ಥಿಕವಾಗಿ ಇಷ್ಟು ದೊಡ್ಡ ಮೊತ್ತವನ್ನು ಒದಗಿಸಲು ಸಾಧ್ಯವಾಗದಿದ್ದಾಗ, ಪತಿ ಅಮಾನವೀಯ ಮಾರ್ಗವನ್ನು ಅನುಸರಿಸಿದ್ದಾನೆ.
ಖಾಸಗಿ ಫೋಟೋಗಳ: ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ, ಪತಿ ತನ್ನ ಪತ್ನಿಯ ಖಾಸಗಿ ಹಾಗೂ ವೈಯಕ್ತಿಕ ಫೋಟೋಗಳನ್ನು ಕೇವಲ ಸಂಗ್ರಹಿಸಿಕೊಳ್ಳುವುದಷ್ಟೇ ಅಲ್ಲದೆ, ನೇರವಾಗಿ ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದಾನೆ. ಈ ವಿಷಯವನ್ನು ಸಂತ್ರಸ್ತೆ ಪತ್ನಿಯವರಿಗೆ ಮೊದಲಿಗೆ ಅವರ ಸಂಬಂಧಿಕರು ತಿಳಿಸಿ ಬೆಚ್ಚಿಬೀಳುವಂತಾಗಿತ್ತು. ಪತಿಯ ನಡೆ ತನ್ನ ವ್ಯಕ್ತಿತ್ವ, ಗೌರವ ಮತ್ತು ಬದುಕಿನ ಮೇಲೆ ಆಘಾತ ಬೀರಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೈಹಿಕ ಹಲ್ಲೆಗೂ ಒಳಗಾದ ಪತ್ನಿ: ಸಂತ್ರಸ್ತೆ ಈ ಬಗ್ಗೆ ತನ್ನ ಪತಿಯನ್ನು ಪ್ರಶ್ನಿಸಿದಾಗ, ಪತಿಯು ಪಶ್ಚಾತ್ತಾಪ ತೋರಿಸದೇ, ಬದಲಿಗೆ ಆಕೆಯ ಮೇಲೆಯೇ ದೈಹಿಕ ಹಲ್ಲೆ ನಡೆಸಿದ್ದಾನೆ ಎಂಬುದೂ ದೂರಿನಲ್ಲಿ ದಾಖಲಾಗಿದೆ. ಹೀಗಾಗಿ ಆಕೆ ಎದುರಿಸುತ್ತಿದ್ದ ಕಿರುಕುಳವು ಕೇವಲ ಮಾನಸಿಕ, ಸಾಮಾಜಿಕ ಅವಮಾನವಷ್ಟೇ ಅಲ್ಲದೆ ದೈಹಿಕ ಹಿಂಸೆಯೂ ಆಗಿದೆ ಎಂಬುದು ಸ್ಪಷ್ಟವಾಗಿದೆ.
ಎಲ್ಲಾ ಬಗೆಯ ಹಿಂಸೆಗಳಿಂದ ಕಂಗೆಟ್ಟ ಮಹಿಳೆ ಕೊನೆಗೆ ಧೈರ್ಯ ತೋರಿಸಿ, ಬೆಂಗಳೂರು ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಆಧಾರದ ಮೇಲೆ, ಪೊಲೀಸರು ತಕ್ಷಣ ಆರೋಪಿಯಾದ ಪತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪ್ರಸ್ತುತ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿಯನ್ನು ಬೇಗನೇ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈವಾಹಿಕ ಜೀವನವನ್ನು ಕಾಪಾಡಬೇಕಾದ ಪತಿ ತನ್ನ ಸ್ವಾರ್ಥಕ್ಕಾಗಿ ವರದಕ್ಷಿಣೆ ಒತ್ತಾಯಿಸಿ, ಪತ್ನಿಯ ಮಾನವೀಯ ಹಕ್ಕುಗಳನ್ನು ತುಳಿದಿರುವುದು ಸಮಾಜಕ್ಕೆ ಗಂಭೀರ ಎಚ್ಚರಿಕೆಯಾಗಿದೆ. ಕಾನೂನು ತನ್ನ ಹಾದಿಯಲ್ಲಿ ನಡೆದು, ಇಂತಹ ವರ್ತನೆಗೆ ಕಟ್ಟುನಿಟ್ಟಿನ ಶಿಕ್ಷೆ ವಿಧಿಸುವ ನಿರೀಕ್ಷೆಯಿದೆ.