ಬಿಜೆಪಿ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳಲು ಎಡಗೈ ಸಮುದಾಯದ ಪ್ರತಿನಿಧಿಗಳಿಗೆ ಪರಿಷತ್‌ ಸದಸ್ಯ ಸುಧಾಮ್‌ ದಾಸ್‌ ಮನವಿ.

ಬಿಜೆಪಿ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳಲು ಎಡಗೈ ಸಮುದಾಯದ ಪ್ರತಿನಿಧಿಗಳಿಗೆ ಪರಿಷತ್‌ ಸದಸ್ಯ ಸುಧಾಮ್‌ ದಾಸ್‌ ಮನವಿ.

ಇ.ಡಬ್ಲ್ಯೂ.ಎಸ್. ಮೀಸಲಾತಿ ಸಂಬಂಧ ಸಂವಿಧಾನ ತಿದ್ದುಪಡಿಗಾಗಿ ಸರ್ಜಿಕಲ್ ಸ್ಟ್ರೈಕ್ ಮಾದರಿ ಕಾರ್ಯಾಚರಣೆ ನಡೆಸಿ, ಒಳ ಮೀಸಲಾತಿ ಕುರಿತ ತಿದ್ದುಪಡಿಯನ್ನು ಅಲಕ್ಷಿಸುವ ಮೂಲಕ ಪರಿಶಿಷ್ಟ ಸಮುದಾಯಕ್ಕೆ ದ್ರೋಹ ಬಗೆದ ಬಿಜೆಪಿ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳಲು ಎಡಗೈ ಸಮುದಾಯದ ಪ್ರತಿನಿಧಿಗಳಿಗೆ ಮನವಿ.

ಪರಿಶಿಷ್ಟರ ಒಳ ಮೀಸಲಾತಿ ಕುರಿತ ಸರ್ಕಾರದ ದಿನಾಂಕ: 25.08.2025 ರ ಅಧಿಸೂಚನೆ ಮೂಲಕ ಎಡಗೈ ಸಮುದಾಯದ ಮೂರೂವರೆ ದಶಕದ ಹೋರಾಟಕ್ಕೆ ಜಯ ಒದಗಿಸಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಸರ್ಕಾರಕ್ಕೆ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸದರಿ ಹೋರಾಟದ ಫಲವಾಗಿ ದೊರಕಿರುವ ಮೀಸಲಾತಿಯ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಮುದಾಯ ಸದಸ್ಯರೆಲ್ಲರಿಗೂ ಸೂಕ್ತ ಮಾರ್ಗದರ್ಶನ ಒದಗಿಸುವ ಮಹತ್ವದ ಜವಾಬ್ದಾರಿ ಈ ಹೋರಾಟದ ಪ್ರತಿಯೊಂದು ಹಂತದಲ್ಲಿಯೂ ಪ್ರಮುಖ ಪಾತ್ರ ವಹಿಸಿರುವ ಮುಖಂಡರ ಹೆಗಲ ಮೇಲಿದೆ. ಈ ಜವಾಬ್ದಾರಿ ನಿರ್ವಹಿಸಲು ತತ್‌ಕ್ಷಣವೇ ಕಾರ್ಯಪ್ರವೃತ್ತರಾಗಬೇಕಾದ ಅವಶ್ಯಕತೆ ಇರುವ ಕಾರಣ ಸಮುದಾಯದ ಪ್ರಮುಖ ಮುಖಂಡರು, ವಿಷಯ ತಜ್ಞರು ಹಾಗೂ ವಿಶ್ವವಿದ್ಯಾಲಯಗಳ ಸಮುದಾಯ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಗೆ ಈ ಜವಾಬ್ದಾರಿ ಹೊರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಸಮುದಾಯದ ಎಲ್ಲಾ ಪ್ರತಿನಿಧಿಗಳು, ಅದರಲ್ಲಿಯೂ ಪ್ರಮುಖವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವವರು, ಕೇವಲ ಬಿಜೆಪಿ ಪಕ್ಷದ ಪ್ರತಿನಿಧಿಗಳೊಂದಿಗೆ ಅಂತರ ಕಾಯ್ದುಕೊಳ್ಳುವುದಷ್ಟೇ ಅಲ್ಲದೆ, ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯವನ್ನು ಒಡೆದು ಎಡಗೈ ಸಮುದಾಯದ ಬೆಂಬಲ ಕಿತ್ತುಕೊಳ್ಳಲು ಆ ಸಮುದಾಯಕ್ಕೆ ಬಗೆದ ದ್ರೋಹ ಕುರಿತಂತೆ ಎಡಗೈ ಸಮುದಾಯವನ್ನು ಜಾಗೃತಗೊಳಿಸಬೇಕಾದ ಅವಶ್ಯಕತೆ ಇದೆ.

ಜಸ್ಟಿಸ್ ಸಂತೋಷ್ ಹೆಗ್ಡೆ ನೇತೃತ್ವದ 5 ಮಂದಿ ನ್ಯಾಯಾಧೀಶರ ಪೀಠ ಇ.ವಿ. ಚಿನ್ನಯ್ಯ v/s State of Andhra Pradesh ಪ್ರಕರಣದಲ್ಲಿ ಒಳ ಮೀಸಲಾತಿಗೆ ದೊಡ್ಡ ತಡೆಗೋಡೆ ಒಡ್ಡಿತ್ತು. ಇದರ ನಿವಾರಣೆಗಾಗಿ ಮಾರ್ಗೋಪಾಯ ಒದಗಿಸುವ ಸಲುವಾಗಿ ಸೃಷ್ಟಿಯಾಗಿದ್ದ ಜಸ್ಟಿಸ್ ಉಷಾ ಮೆಹ್ರಾ ಆಯೋಗವು ಒಳ ಮೀಸಲಾತಿ ಕುರಿತ ಕಾನೂನು ಅಡಚಣೆ ನಿವಾರಣೆಗೆ 2 ಮಾರ್ಗೋಪಾಯಗಳನ್ನು ತನ್ನ ವರದಿಯಲ್ಲಿ ಒದಗಿಸಿತ್ತು. ಮೊದಲ ಆಯ್ಕೆಯೆಂದರೆ ಒಳ ಮೀಸಲಾತಿ ಅಳವಡಿಕೆಗೆ ಸಂವಿಧಾನ ತಿದ್ದುಪಡಿ ಅಥವಾ ಎರಡನೇ ಆಯ್ಕೆ 7 ಸದಸ್ಯರ ಸಂವಿಧಾನಿಕ ಪೀಠದ ಮೂಲಕ ಒಳ ಮೀಸಲಾತಿ ಪರವಾದ ತೀರ್ಪು ಪಡೆಯಲು ಪ್ರಯತ್ನಿಸುವುದು.

ಆಯೋಗವು ಅಂದಿನ ಯುಪಿಎ ಸರ್ಕಾರದ ಸಾಮಾಜಿಕ ನ್ಯಾಯ ಖಾತೆಯ ಸಚಿವೆ ಶ್ರೀಮತಿ ಮೀರಾ ಕುಮಾರ್ ಅವರಿಗೆ ಈ ವರದಿ ಸಲ್ಲಿಸಿದ್ದರೂ, ಅಂದಿನ ಸರ್ಕಾರಕ್ಕೆ ಸಂವಿಧಾನ ತಿದ್ದುಪಡಿಗೆ ಅವಶ್ಯವಿದ್ದ ಸದಸ್ಯರ ಬೆಂಬಲ ಉಭಯ ಸದನದಲ್ಲಿರದ ಕಾರಣ ಈ ಆಯ್ಕೆ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ 2014ರಲ್ಲಿ ಬೃಹತ್ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮೂಲಕ ಮೀಸಲಾತಿ ಒದಗಿಸಲು ಪ್ರಾಮುಖ್ಯತೆ ನೀಡಿದ್ದು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಪರಿಶಿಷ್ಟರಿಗಲ್ಲ. ಬದಲಾಗಿ, ಮೀಸಲಾತಿಗಾಗಿ ಒಂದೇ ಒಂದು ಅರ್ಜಿ ಸಹ ಸಲ್ಲಿಸದ ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿದವರಿಗೆ ಇ.ಡಬ್ಲ್ಯೂ.ಎಸ್. ಕ್ಯಾಟಗರಿ ಎಂದು ಹೆಸರಿಸಿ 08 ಜನವರಿ 2019ರಂದು ಲೋಕಸಭಾ ಕಲಾಪ ಪಟ್ಟಿಯಲ್ಲೂ ಇರದ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿ, ಅದೇ ಮಾರ್ಗ, ಅದೇ ವೇಗದಲ್ಲಿ 09 ಜನವರಿ ರಾಜ್ಯಸಭೆಯಲ್ಲಿಯೂ ಒಪ್ಪಿಗೆ ಪಡೆದು 12 ಜನವರಿ ಮಧ್ಯರಾತ್ರಿ ಅಂದಿನ ರಾಷ್ಟ್ರಪತಿ ಅಂಕಿತ ಪಡೆಯುವ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾದರಿ ಕಾರ್ಯಾಚರಣೆ ನಡೆಸಿ ತಿದ್ದುಪಡಿ ಜಾರಿಗೊಳಿಸಿತು.

ಆದರೆ ಅದೇ ಬಿಜೆಪಿ ಸರ್ಕಾರದ ಸಾಮಾಜಿಕ ನ್ಯಾಯ ಖಾತೆಯ ಸಚಿವರಾಗಿದ್ದ, ಇದೇ ರಾಜ್ಯದ ಎ. ನಾರಾಯಣಸ್ವಾಮಿಯವರು 2022ರಲ್ಲಿ ಸಂಸತ್ತಿನಲ್ಲಿ ಪರಿಶಿಷ್ಟರ ಮೀಸಲಾತಿ ಕುರಿತು ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸರ್ಕಾರದ ಮುಂದೆ ಒಳ ಮೀಸಲಾತಿ ಸಂಬಂಧ ತಿದ್ದುಪಡಿಗೆ ಯಾವುದೇ ಪ್ರಸ್ತಾವ ಇಲ್ಲ ಎಂಬ ಉತ್ತರ ನೀಡಿ, ಖುದ್ದು ಸಾಮಾಜಿಕ ನ್ಯಾಯ ಖಾತೆ ಸಚಿವರಾಗಿದ್ದರೂ ಒಳ ಮೀಸಲಾತಿ ಜಾರಿಗೆ ತಾವು ಯಾವುದೇ ಆಸಕ್ತಿ ವಹಿಸಿಲ್ಲ ಎಂಬುದನ್ನು ಅಧಿಕೃತವಾಗಿ ಜಾಹೀರಪಡಿಸಿದ್ದರು. ಅಲ್ಲದೆ ತಮ್ಮ ಪಕ್ಷದ ಸಂಸದ ಗೋವಿಂದ ಕಾರಜೋಳರೊಂದಿಗೆ ಸೇರಿ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕಾಂಗ್ರೆಸ್ ಒಳ ಮೀಸಲಾತಿ ವಿರೋಧಿ ಎಂಬಂತೆ ತೀವ್ರತರದಲ್ಲಿ ರಾಜ್ಯವ್ಯಾಪಿ ಅಪಪ್ರಚಾರ ನಡೆಸಿದ್ದರು.

ಇನ್ನೂ ಎಡಗೈ ಸಮುದಾಯದ ಮನದಲ್ಲಿ ಹಸಿರಾಗಿರುವಾಗಲೇ, ಒಳ ಮೀಸಲಾತಿ ಜಾರಿಗೆ ನಮ್ಮ ಪಕ್ಷದ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ ನಮ್ಮ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಹಾಗೂ ಶ್ರೀ ಆರ್.ಬಿ. ತಿಮ್ಮಾಪುರ ಅವರು, ನಮ್ಮ ಸಮುದಾಯಕ್ಕೆ ದ್ರೋಹ ಬಗೆದ ಹಾಗೂ ಪರಿಶಿಷ್ಟರ ಒಳ ಮೀಸಲಾತಿ ಕುರಿತಂತೆ ನಮ್ಮ ಪಕ್ಷದ ವಿರುದ್ಧ ನಿರಂತರ ಅಪಪ್ರಚಾರ ಮಾಡಿರುವ ಎ. ನಾರಾಯಣಸ್ವಾಮಿ ಹಾಗೂ ಗೋವಿಂದ ಕಾರಜೋಳರೊಂದಿಗೆ, ನಮ್ಮ ಸಮುದಾಯದ ಸದಸ್ಯರೊಂದಿಗೆ ಇದೇ 31 ಆಗಸ್ಟ್ ಸಭೆ ಆಯೋಜಿಸಿರುವುದು ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದ್ದು, ಸಮುದಾಯದ ಹಾಗೂ ಪಕ್ಷದ ಹಿತದೃಷ್ಟಿಯಿಂದ ಸದರಿ ಸಭೆಯಿಂದ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವವರನ್ನು ದೂರವಿಡಲು ನಮ್ಮ ಪಕ್ಷದ ಸಚಿವರಿಗೆ ಈ ಮೂಲಕ ಆಗ್ರಹ ಪೂರ್ವಕ ಮನವಿ ಮಾಡುತ್ತಿದ್ದೇನೆ.

Spread the love

Leave a Reply

Your email address will not be published. Required fields are marked *