ಇತ್ತೀಚೆಗೆ ಯಾವುದಾದರೂ ಒಂದು ವಿವಾದಾತ್ಮಕ ವಿಚಾರದಲ್ಲಿ ಚರ್ಚೆಯಲ್ಲಿರುವ ಉಡುಪಿಯ ಪೇಜಾವರ (Pejavara) ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿಯು (Vishwa prasanna Swamiji) ಪದೆ ಪದೇ ಸಂವಿಧಾನ ವಿರುದ್ಧವಾಗಿ ಒಂದಲ್ಲೊಂದು ಹೇಳಿಕೆನ್ನು ನೀಡುತ್ತಲೆ ಇರುತ್ತಾರೆ.
ದಿನಾಂಕ 24/11/2024 ರಂದು ಬೆಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್, ಕರ್ನಾಟಕ ಘಟವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೇಜಾವರ ಸ್ವಾಮೀಜಿಯವರು ‘ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ’ ಎಂದು ಸಂವಿಧಾನವನ್ನು ಬದಲಿಸುವ ಮಾತನಾಡಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕೆಲವರು ಸ್ವಾಮೀಜಿ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಕಾಂಗ್ರೆಸ್ ಪಕ್ಷದ ಎಮ್ ಎಲ್ ಸಿ ಸುಧಾಮ್ ದಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿಯ ವಿರುದ್ಧ ಆಕ್ರೋಷವನ್ನು ಹೊರ ಹಾಕಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪತ್ರಿಕೆಯೊಂದ ಪ್ರತಿಯನ್ನು ಲಗತ್ತಿಸಿರುವ ಅವರು “ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಅದರಲ್ಲೂ ಸಂವಿಧಾನ ಜಾರಿಯಾದ ನಂತರ ಇಲ್ಲಿನ ಮೇಲ್ವರ್ಗದ ಮಹಿಳೆಯರು ಸೇರಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮತ್ತು ದೇಶದ ಕಟ್ಟ ಕಡೆಯ ವ್ಯಕ್ತಿಗೂ ಗೌರವಯುತ ಮತ್ತು ಘನತೆಯುತ ಬದುಕನ್ನು ನಡೆಸುವುದಕ್ಕೆ ಅವಕಾಶ ಸಿಕ್ಕಿರುವುದು ಬಾಬಾ ಸಾಹೇಬರು ನಮಗೆ ಕೊಟ್ಟ ಸಂವಿಧಾನದಿಂದ.
https://twitter.com/Hpsudhamdas/status/1861293613378085340
ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನಗೆ ಬೇಕಾದ ಸಂವಿಧಾನಾತ್ಮಕ ಪರಿಧಿಯಲ್ಲಿ ಬದುಕುತಿದ್ದಾನೆ ಮತ್ತು ಅದಕ್ಕೆ ಪ್ರತಿಯೊಬ್ಬರೂ ಕೂಡ ಅರ್ಹರು.
ಇಲ್ಲಿ ಎಲ್ಲಾ ಧರ್ಮಗಳಿಗೂ ಕೂಡ ಅದರದೇ ಆದ ಮಹತ್ವವಿದೆ, ಸಂವಿಧಾನದ ಆರ್ಟಿಕಲ್ 25 ಹೇಳಿರುವಂತೆ ಅವರಿಗೆ ಇಷ್ಟವಾದ ಜೀವನ ಶೈಲಿಯನ್ನು ರೂಪಿಸಿಕೊಳ್ಳುವುದು ಮತ್ತು ರೂಡಿಸಿಕೊಳ್ಳುವುದು ಅವರವರ ಇಷ್ಟ, ಈ ವಿಷಯದಲ್ಲಿ ಮತ್ತೊಬ್ಬರು ಅಡ್ಡಿಪಡಿಸುವುದಾಗಲಿ ಅಥವ ಒಂದು ವರ್ಗವಾಗಲಿ, ಜಾತಿಯಾಗಲಿ, ವರ್ಣವೇ ಆಗಲಿ ಮತ್ತೊಂದು ವರ್ಗವನ್ನು ನಿಯಂತ್ರಣ ಮಾಡುವುದು ಅಥವ ಮಾಡಲು ಪ್ರಯತ್ನಿಸುವುದು ಸಂವಿಧಾನ ಬಾಹಿರ.
ಸಂವಿಧಾನದಲ್ಲಿ ಹೇಳಿರುವಂತೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಬ್ರಾತೃತ್ವದ ಆಶಯಗಳನ್ನು ನಾವೆಲ್ಲರೂ ಪಾಲಿಸಿಕೊಂಡು ನಡೆದರೆ ಬದುಕುನುದ್ದಕ್ಕೂ ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳಬಹುದು, ಆದ್ದರಿಂದಲೇ ಭಾರತದಲ್ಲಿರುವ ಎಲ್ಲಾ ಧರ್ಮಗಳು ಕೂಡ ಸಂವಿಧಾನದ ಅಡಿಯಲ್ಲಿ ಇರುವುದು.
ಗುರುಕುಲ ಶಿಕ್ಷಣ ಪದ್ಧತಿಯು ಕೇವಲ ಒಂದು ವರ್ಗಕ್ಕೆ ಸೀಮಿತವಾದ ಶಿಕ್ಷಣ ಪದ್ಧತಿ, ಅಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟರಿಗೆ ಮತ್ತು ತುಳಿತಕ್ಕೆ ಒಳಗಾದ ಯಾವುದೇ ಜನರಿಗೆ ಕೂಡ ಶಿಕ್ಷಣ ಸಿಗುತ್ತಿರಲಿಲ್ಲ ಎಂಬುದು ವಾಸ್ತವ. ಅಂತಹ ಕೆಟ್ಟ ದುರಾಲೋಚನೆಯ ಪದ್ಧತಿಯನ್ನು ಕಿತ್ತೊಗೆದು ಸರ್ವರಿಗೂ ಶಿಕ್ಷಣ ಒದಗಿಸಿದ್ದು ಇದೆ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ಎಂಬುದು ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ನೆನಪಿನಲ್ಲಿ ಇಡಬೇಕು.
ಇನ್ನು ಸಂವಿಧಾನ ಜಾರಿಗೊ ಮುನ್ನ ಸನಾತನ ಧರ್ಮದ ಆಡಳಿತದಲ್ಲಿ ಎಲ್ಲಾ ತುಳಿತಕ್ಕೆ ಒಳಗಾದ ವರ್ಗದವರು ಕತ್ತಿಗೆ ಕುಡಿಕೆ, ಸೊಂಟಕ್ಕೆ ಪೊರಕೆ ಮತ್ತು ಕಾಲಿಗೆ ಗಂಟೆಯನ್ನು ಕಟ್ಟಿಕೊಂಡು ಗುಲಾಮರಂತೆ ಬದುಕುತ್ತಿದ್ದಂತಹ ಸನ್ನಿವೇಶ ಮತ್ತು ಇತಿಹಾಸವನ್ನು ನಾವು ಕಂಡಿದ್ದೇವೆ. ಸಂವಿಧಾನ ಜಾರಿಯಾದ ನಂತರದಲ್ಲಿ ಎಲ್ಲಾ ಭಾರತದ ಪ್ರಜೆಗಳು ಘನತೆಯುತವಾಗಿ ಎಲ್ಲರಿಗೂ ಸರಿ ಸಮಾನರಂತೆ ಬದುಕುತ್ತಿರುವುದನ್ನು ನೋಡುತ್ತಿರುವುದರ ಜೊತೆಗೆ ನಾವೂಗಳು ಕೂಡ ಬದುಕುತಿದ್ದೇವೆ.
ನಮ್ಮ ದೇಶದಲ್ಲಿ ಹುಟ್ಟಿದ ಮಗುವಿನಿಂದ ಸಾಯುವ ವಯಸ್ಸಿನವರೆಗೂ ಸರ್ವರಿಗೂ ಸಂವಿಧಾನ ಅವರಿಗೆ ಬೇಕಾದಂತಹ ಹಕ್ಕುಗಳು ಮತ್ತು ಪಾಲಿಸಬೇಕಾದ ಕರ್ತವ್ಯಗಳನ್ನು ನೀಡಿದೆ, ಇಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಮೊದಲು ಮತ್ತು ಕೊನೆ.
ಜೈ ಸಂವಿಧಾನ” ಎಂದು ಹೇಳುವ ಮೂಲಕ ಸ್ವಾಮೀಜಿಯವರಿಗೆ ಸಂವಿಧಾನದ ಪಾಠ ಮಾಡಿ ಕುಟುಕುವ ಕೆಲಸ ಮಾಡಿದ್ದಾರೆ.