ಧರ್ಮಸ್ಥಳದಲ್ಲಿ ಸೌಜನ್ಯಳ ಅತ್ಯಾಚಾರ ಪ್ರಕರಣ: ಸಿಬಿಐ ಕೋರ್ಟ್‌ನ ವರದಿಯಲ್ಲೇನಿದೆ.

ಧರ್ಮಸ್ಥಳದಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ ಪಿಯು ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶ ಈ ಕೆಳಗಿನಂತಿದೆ.

ಅತ್ಯಚಾರ ಪ್ರಕರಣ ಬೆಳಕಿಗೆ ಬಂದ ನಂತರದ 48 ಗಂಟೆಯನ್ನು ಸಾಕ್ಷ್ಯ ಸಂಗ್ರಹದ ದೃಷ್ಟಿಯಲ್ಲಿ ಅಮೂಲ್ಯವಾದ ಸಮಯ. ಅದನ್ನು ಗೋಲ್ಡನ್‌ ಅವರ್‌ ಎಂದು ಕರೆಯಲಾಗುತ್ತದೆ. ಆದರೆ ಸೌಜನ್ಯ ಅತ್ಯಾಚಾರ ಕೊಲೆ ನಡೆದು ಎರಡು ದಿನಗಳಲ್ಲಿ ಅಪರಾಧಿಗಳ ಪತ್ತೆಗೆ ಪೂರಕವಾಗುವ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಲಾಗಿದೆ ಎಂಬ ಅನುಮಾನವನ್ನು ಸಿಬಿಐ ಕೋರ್ಟ್‌ ವ್ಯಕ್ತಪಡಿಸಿದೆ. ಸಿಬಿಐ ಕೋರ್ಟಿನ ಆದೇಶದ ಪ್ರತಿ ಲಭ್ಯವಾಗಿದೆ.

ಅತ್ಯಾಚಾರಕ್ಕೊಳಗಾದ ಯುವತಿಯ ಯೋನಿಯಿಂದ ಸಂಗ್ರಹಿಸಿದ ಸ್ವ್ಯಾಬ್‌ ಅನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿಲ್ಲ. ಸ್ವ್ಯಾಬ್‌ ಅನ್ನು ಒಣಗಿಸಿ ಸಂರಕ್ಷಿಸಬೇಕು. ಆದರೆ, ʼಸೌಜನ್ಯಳ ಯೋನಿ ಸ್ವ್ಯಾಬ್‌ ಪರೀಕ್ಷೆಗೆಂದು ಲ್ಯಾಬ್‌ಗೆ ತಲುಪುವಾಗ ಫಂಗಸ್‌ ಹಿಡಿದಿತ್ತುʼ ಎಂದು ಎಫ್‌ಎಸ್‌ಎಲ್‌ ಅಧಿಕಾರಿಗಳು ವರದಿ ಕೊಟಿರುವುದನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವೈದ್ಯರಿಗೆ ಸಂಕಟ: ಆಗ ಬೆಳ್ತಂಗಡಿ ಜನರಲ್‌ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದವರು ಡಾ ಆದಂ. ಅವರು ಸೌಜನ್ಯಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅವರಿಗೆ ಸಹಕರಿಸಿದವರು ಉಜಿರೆಯ ಮೆಡಿಕಲ್‌ ಆಫೀಸರ್‌ ಡಾ ರಶ್ಮಿ. ಈಗ ಸಾಕ್ಷ್ಯ ನಾಶದ ತೂಗುಗತ್ತಿ ಈ ಇಬ್ಬರ ಮೇಲೆ ಮತ್ತು ಆಗ ಬೆಳ್ತಂಗಡಿಯಲ್ಲಿ ಪಿಎಸ್‌ಐ ಆಗಿದ್ದ ಯೋಗೇಶ್‌ ಕುಮಾರ್‌ ಅವರ ನೆತ್ತಿಯ ಮೇಲೆ ಅಧಿಕೃತವಾಗಿ ತೂಗಾಡುತ್ತಿದೆ.

ಮರಣೋತ್ತರ ಪರೀಕ್ಷೆ ಲೋಪ: ಶವದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಮೈ ಮೇಲಿನ ಗಾಯದ ಗುರುತುಗಳನ್ನು ವರದಿಯಲ್ಲಿ ದಾಖಲಿಸಿಲ್ಲ. ಆಕೆಯ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಇದ್ದುದನ್ನು ಗಮನಿಸಿದ್ದಾರೆ. ಡಾ ರಶ್ಮಿ ತಮ್ಮ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ. ಕಾಣೆಯಾದ ದಿನ ಸುಮಾರು ಸಂಜೆ 6ರ ವೇಳೆಗೆ ಆಕೆ ಆಹಾರ ಸೇವಿಸಿರುವ ಸಾಧ್ಯತೆ ಇದೆ ಎಂದು ದಾಖಲಿಸಿದ್ದಾರೆ. ಆದರೆ, ಡಾ ಆದಂ ಅವರು ಆ ಆಹಾರದ ಸ್ಯಾಪಲ್ಸ್‌ ಸಂಗ್ರಹಿಸಿಲ್ಲ. ಸಂಗ್ರಹಿಸಿದ್ದರೆ ವಿಷ ಪದಾರ್ಥ ನೀಡಲಾಗಿದೆಯೇ ಎಂಬುದನ್ನು ಪತ್ತೆ ಮಾಡಬಹುದಿತ್ತು. ಆದರೆ, ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ವಕೀಲರ ವಾದವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೂಕ್ತ ತನಿಖೆ ಆಗಿಲ್ಲ: ಅತ್ಯಾಚಾರ/ ಕೊಲೆ ನಡೆದಿರುವುದಕ್ಕೆ ಪೂರಕ ಸಾಕ್ಷ್ಯ ಸಂಗ್ರಹಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬುದನ್ನು ಕೋರ್ಟ್‌ ಗಮನಿಸಿದೆ. ತನಿಖಾಧಿಕಾಧಿಕಾರಿಗಳು ಧರ್ಮಸ್ಥಳದ ನೇಚರ್‌ ಕ್ಯೂರ್‌ ಹಾಸ್ಪಿಟಲ್‌ನ ಫ್ರಂಟ್‌ ಗೇಟಿನ ಸಿಸಿಟಿವಿ ಫೂಟೇಜ್‌ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಆಕೆಯ ಕೊಡೆ, ಚಪ್ಪಲಿ, ಒಳಉಡುಪುಗಳನ್ನು ಸಂಗ್ರಹಿಸಿಲ್ಲ. ಪೊಲೀಸರು ಮಹಜರು ನಡೆಸಿದ ಒಳ ಉಡುಪಿನಲ್ಲಿ ಮಳೆಯಲ್ಲಿ ನೆನೆದ ಅಥವಾ ಮಣ್ಣಾಗಿರುವ ಯಾವುದೇ ಕುರುಹು ಇರಲಿಲ್ಲ. ಮೃತದೇಹ ಸಿಕ್ಕ ನಂತರ ಪೊಲೀಸರು ತಮ್ಮ ಮನೆಯಿಂದ ಮಗಳ ಒಳ ಉಡುಪು ಕೊಂಡೊಯ್ದ ಬಗ್ಗೆ ಸೌಜನ್ಯ ತಂದೆ ವಿಚಾರಣೆಯ ವೇಳೆ ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಿ ಅನುಮಾನ ವ್ಯಕ್ತಪಡಿಸಲಾಗಿದೆ.

ಅಂತಿಮ ತೀರ್ಪಿನಲ್ಲಿ ಸಂತೋಷ್‌ ರಾವ್‌ ನಿರ್ದೋಷಿ ಎಂದು ಹೇಳಿದ್ದಷ್ಟೇ ಅಲ್ಲ, ಈ ಪ್ರಕರಣದಲ್ಲಿ ಅಕ್ವಿಟಲ್‌ ಕಮಿಟಿಯು ತನಿಖಾಧಿಕಾರಿಗಳನ್ನು ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದೂ ಸೂಚಿಸಿದೆ. ಸಂತ್ರಸ್ತರ ಪರಿಹಾರ ಯೋಜನೆಯಡಿ ಸೌಜನ್ಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸೂಚಿಸಲಾಗಿದೆ.

ಘಟನೆ : 2012 ಅಕ್ಟೋಬರ್‌ 9ರಂದು ಸಂಜೆ 4.15ರ ಸುಮಾರಿಗೆ ಕಾಲೇಜಿನಿಂದ ಬಸ್‌ನಲ್ಲಿ ಬಂದು ನೇತ್ರಾವತಿ ಸ್ನಾನಘಟ್ಟದ ಬಳಿ ಬಂದಿಳಿದು ಮನೆ ಕಡೆ ಹೊರಟ ಸೌಜನ್ಯಳನ್ನು ಆಕೆಯ ಸೋದರ ಮಾವ ಮತ್ತು ಅತ್ತೆ ಜೀಪಿನಲ್ಲಿ ತೆರಳುವಾಗ ಕಂಡು ಮಾತನಾಡಿಸಿದ್ದಾರೆ. ಕೆಲವು ಅಂಗಡಿಯವರೂ ಕಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಸಂಜೆ ಏಳರ ವೇಳೆಗೆ ಸೌಜನ್ಯ ತಾಯಿ ಆತಂಕಗೊಂಡು ಸಂಬಂಧಿಗಳ ಸಹಿತ ನೇತ್ರಾವತಿ ಸ್ನಾನಘಟ್ಟದ ಬಳಿ ಹೋಗಿ ಹಲವರನ್ನು ವಿಚಾರಿಸಿದ್ಧಾರೆ. ನಂತರ ಪೊಲೀಸರಿಗೆ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. 10ರಂದು ಮಧ್ಯಾಹ್ನ 12.30ರ ಸುಮಾರಿಗೆ ಕಾಡಿನ ಪೊದೆಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿದೆ. ಆಕೆಯ ಕತ್ತಿನಲ್ಲಿದ್ದ ಕಾಲೇಜಿನ ಐಡಿ ಕಾರ್ಡಿನ ಟ್ಯಾಗ್‌ ನಿಂದ ಕತ್ತಿಗೆ ಬಿಗಿಯಲಾಗಿತ್ತು. ಬಟ್ಟೆ ಹರಿದಿತ್ತು, ಎದೆಯಲ್ಲಿ ಕಚ್ಚಿದ ಗುರುತಿತ್ತು, ಕೈಗಳನ್ನು ಪಕ್ಕ ಗಿಡವೊಂದಕ್ಕೆ ವೇಲ್‌ನಿಂದ ಕಟ್ಟಲಾಗಿತ್ತು. ಒಳ ಉಡುಪು ಇರಲಿಲ್ಲ. ಆ ರಾತ್ರಿಯಿಡೀ ಮಳೆ ಸುರಿದರೂ ಆಕೆಯ ಬ್ಯಾಗಿನಲ್ಲಿದ್ದ ಪುಸ್ತಕ ಒದ್ದೆಯಾಗಿರಲಿಲ್ಲ! ಸಾಕ್ಷಿ ಸಿಗಬಾರದೆಂಬ ಕಾರಣಕ್ಕೆ ಗುಪ್ತಾಂಗಕ್ಕೆ ಮಣ್ಣು ತುಂಬಲಾಗಿತ್ತು. ಅದಾಗಲೇ ದೇಹವನ್ನು ಇರುವೆ, ಕೀಟಗಳು ಮುತ್ತಿದ್ದವು.

ಧೀರಜ್‌ ಜೈನ್‌, ಮಲ್ಲಿಕ್‌ ಜೈನ್‌, ಉದಯ್‌ ಜೈನ್‌ ಎಂಬ ಯುವಕರ ಮೇಲೆ ಸೌಜನ್ಯ ಕುಟುಂಬ ಅನುಮಾನ ವ್ಯಕ್ತಪಡಿಸಿತ್ತು. ಘಟನೆ ನಡೆದ ದಿನ ಸೌಜನ್ಯಳ ಮೃತದೇಹ ಸಿಕ್ಕ ಮಣ್ಣಗುಡ್ಡೆ ಪ್ರದೇಶದಲ್ಲಿ ಈ ಮೂವರನ್ನು ನೋಡಿರುವುದಾಗಿ ಸೌಜನ್ಯ ಚಿಕ್ಕಮ್ಮ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು. ಇವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಸಂಬಂಧಿಗಳು. ಈ ಮೂವರನ್ನು ಡಿಎನ್‌ಎ ಪರೀಕ್ಷೆ ಮತ್ತು ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Related posts

Leave a Comment