HASSAN: ಅನುಮಾನದ ಭೂತ ಹೊಕ್ಕಿತ್ತು, ತಾಳಿ ಕಟ್ಟಿದ ಮಡದಿಯನ್ನು ಕ್ರೂರಾತಿಕ್ರೂರವಾಗಿ ಕೊಂದ

ಕೆಲಸಕ್ಕೆ ಹೋಗುವ ಪತ್ನಿಯ ಮೇಲೆ ವಿನಾಕಾರಣ ಅನುಮಾನದ ಪೀಡೆ ನೆತ್ತಿಗೇರಿಸಿಕೊಂಡು ಆಕೆಯನ್ನ ಹಿಂಬಾಲಿಸೋಕೆ ಶುರು ಮಾಡಿದ್ದ ಪತಿರಾಯ ಕಡೆಗೆ ಆಕೆಯ ನಡತೆ ಬಗ್ಗೆ ಅನುಮಾನಗೊಂಡು ಆಕೆಯನ್ನ ಬರ್ಬರವಾಗಿ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ.
ಹಾಸನ, ಜುಲೈ 21: ಅನುಮಾನ ಅನ್ನುವ ಭೂತ ತಲೆಯೊಳಗೆ ಹೊಕ್ಕಿಬಿಟ್ಟರೆ ಅದೆಂತಹ ಸಂಬಂಧಕ್ಕೂ ಅಲ್ಲಿ ಬೆಲೆ ಇರೋದಿಲ್ಲ, ದಶಕಗಳ ಸಹಬಾಳ್ವೆಗೂ ಅಲ್ಲಿ ನೆಲೆ ಇರೋದಿಲ್ಲ, ದಶಕದ ಹಿಂದೆ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳನ್ನೂ ಹೊಂದಿದ್ದ ಆ ದಂಪತಿ ನಡುವೆ ಪತಿಯ ತಲೆ ಹೊಕ್ಕಿದ್ದ ಅದೊಂದು ಅನುಮಾನ ಮಾಡಬಾರದ್ದನ್ನ ಮಾಡಿಸಿಬಿಟ್ಟಿದೆ.

ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡ, ತನಗೆ ಸರಿಸಮಾನವಾಗಿ ಸಂಸಾರದ ನೊಗ ಹೊತ್ತಿದ್ದ ಮಡದಿಯ ಮೇಲೆ ಅನುಮಾನ ಪಡೋಕೆ ಶುರು ಮಾಡಿದ್ದ ಗಂಡ ಆಕೆ ಹೋದಲ್ಲೆಲ್ಲಾ ಹಿಂಬಾಲಿಸೋದು, ದುಡಿದ ಹಣದಲ್ಲಿ ಕುಡಿದು ಮಸ್ತಿ ಮಾಡೋದು, ಮತ್ತೆ ವ್ಯವಹಾರಕ್ಕೆ ತವರು ಮನೆಯಿಂದ ಹಣ ತಗೊಂಬಾ ಅಂತಾ ಪೀಡಿಸ್ತಿದ್ದನಂತೆ. ಹತ್ತಾರು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿ ಮೊನ್ನೆ ಕೂಡ ರಾಜಿ ಸಂಧಾನದ ಮೂಲಕ ಮತ್ತೆ ಬದಲಾಗುವ ಮಾತು ಕೊಟ್ಟು ಬಂದಿದ್ದ ಗಂಡ, ಲೋನ್ ಆಗಿದೆ ಗಿರವಿ ಇಟ್ಟ ಒಡವೆ ಬಿಡಿಸೋಣ ಬಾ ಎಂದು ಪತ್ನಿಯನ್ನ ಕರೆಸಿಕೊಂಡಿದ್ದ. ಅರಣ್ಯ ಸಮೀಪ ಕರೆದೊಯ್ದು ಮನಸೋ ಇಚ್ಚೆ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಂದಿರುವ ನೀಚ ಪತಿ ಇದೀಗ ಅರೆಸ್ಟ್ ಆಗಿದ್ದಾನೆ.

ಮಗಳ ಬರ್ಬರ ಹತ್ಯೆ ಕಂಡ ಪೋಷಕರ ಆಕ್ರಂದನ.. ಹಾಡಹಗಲಿನಲ್ಲೇ ತಾಳಿ ಕಟ್ಟಿದ ಪತ್ನಿಯನ್ನ ಕ್ರೂರಾತಿಕ್ರೂರವಾಗಿ ಕೊಂದ ಗಂಡನ ವಿರುದ್ದ ಜನರ ಆಕ್ರೋಶ… ಅನುಮಾನದ ಭೂತ ತಲೆಗೇರಿಸಿಕೊಂಡವನಿಂದ ಅಮಾನುಷ ಕೃತ್ಯ.. ಹೌದು ಗಂಡ ಹೆಂಡಿರ ಸಂಬಂಧದಲ್ಲಿ ಅನುಮಾನ ಎನ್ನೋ ಭೂತ ತಲೆ ತೂರಿಸಿದರೆ ಅಲ್ಲಿ ಶಾಂತಿ ನೆಮ್ಮದಿ ಅನ್ನೋದು ಸುಳಿಯೋದಿಲ್ಲ. ಇಲ್ಲಿಯೂ ಗಂಡನೆಂಬ ಅನುಮಾನದ ಪಿಶಾಚಿಯೊಬ್ಬ ಮಡದಿಯನ್ನೇ ಬಲಿ ಪಡೆದುಕೊಂಡಿದ್ದಾನೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಎಸ್. ಅಂಕನಹಳ್ಳಿಯ ಅರಣ್ಯದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಹೊಳೆನರಸೀಪುರ ತಾಲ್ಲೂಕಿನ ಆಗೌಡನಹಳ್ಳಿಯ ಚಂದ್ರಮೌಳಿ. 11 ವರ್ಷದ ಹಿಂದೆ ಅಂಬಿಕಾ (32) ರನ್ನ ಮದುವೆಯಾಗಿದ್ದ. ವೃತ್ತಿಯಲ್ಲಿ ಚಾಲಕನಾಗಿದ್ದ ಆತ ದುಡಿದು ಬದುಕಲಿ ಎಂದು ಅಂಬಿಕಾ ಮನೆಯವರೇ ಒಂದು ಆಟೋ ಕೊಡಿಸಿದ್ರಂತೆ. ಆದ್ರೆ ಕುಡಿತದ ಚಟಕ್ಕೆ ದಾಸನಾಗಿದ್ದ ನೀಚ ದುಡಿದ ಹಣವನ್ನೆಲ್ಲಾ ಕುಡಿಯೋದು, ಮತ್ತೆ ತವರಿನಿಂದ ಹಣ ತಾ ಎಂದು ಹಲ್ಲೆ ಮಾಡೋದು ಮಾಡ್ತಿದ್ದ. ಪತಿಯ ಕಾಟ ಹೆಚ್ಚಾದಾಗ ತಾನೇ ಹಾಸನದ ಫ್ಯಾಕ್ಟರಿ ಸೇರಿಕೊಂಡು ದುಡಿಯೋಕೆ ಶುರುಮಾಡಿದ್ದ ಅಂಬಿಕಾ ಸಂಸಾದ ಜವಾಬ್ದಾರಿ ತಾನೂ ಹೊತ್ತು ಕೊಂಡಿದ್ದಳು.

ಆದ್ರೆ ಮಡದಿ ಯಾವಾಗ ದುಡಿಯೋಕೆ ಹೋರಟಳೋ ಆಗಿನಿಂದ ವಿನಾಕಾರಣ ಅನುಮಾನ ಪಡೋದು ಜಗಳ ಮಾಡೋದು ಮಾಡ್ತಿದ್ದನಂತೆ. 11 ವರ್ಷದಲ್ಲಿ ಹತ್ತಾರುಬಾರಿ ಈ ನೀಚನ ಜಗಳ ಠಾಣೆ ಮೆಟ್ಟಿಲೇರಿದೆ. ಆಟೋ ಆಕ್ಸಿಡೆಂಟ್ ಮಾಡಿಕೊಂಡು ರಿಪೇರಿಗಾಗಿ ಪತ್ನಿಯನ್ನು ಪೀಡಿಸುತ್ತಿದ್ದನಂತೆ. ಮೊನ್ನೆ ಕೂಡ ಪತ್ನಿ ಮೆಲೆ ಹಲ್ಲೆ ಮಾಡಿ ಹಳ್ಳಿಮೈಸೂರು ಠಾಣೆಯಲ್ಲಿ ದೂರು ದಾಖಲಾಗಿ ರಾಜಿ ಸಂಧಾನ ಆಗಿತ್ತಂತೆ. ಇನ್ನು ಹೀಗೆಲ್ಲಾ ಮಾಡಲ್ಲ ತಪ್ಪಾಯ್ತು ಎಂದು ಹೇಳಿ ವಾಪಸ್ ಬಂದವನು ಇಂದು ಬೆಳಿಗ್ಗೆ ಡ್ಯೂಟಿಗೆ ಹೊರಟಿದ್ದ ಪತ್ನಿಗೆ ಫೋನ್ ಮಾಡಿ ನನಗೆ ಲೋನ್ ಆಗಿದೆ ನಿಮ್ಮ ಚಿಕ್ಕಮ್ಮನ ಸರ ಅಡ ಇಟ್ಟಿದ್ದೆವಲ್ಲ, ಅದನ್ನ ಬಿಡಿಸೋಣ ಬಾ ಎಂದು ಕರೆದು ಆಕೆಯನ್ನ ಕರೆದೊಯುತ್ತಾ, ದಾರಿ ಮಧ್ಯೆ ಅರಣ್ಯದಲ್ಲಿ ಆಕೆಯನ್ನ ನಿಲ್ಲಿಸಿ ಹಲ್ಲೆ ಮಾಡಿದ್ದಾನೆ. ಏಕಾಏಕಿ ರಾಕ್ಷಸನಂತೆ ವರ್ತಿಸಿ ಹಲ್ಲೆ ಮಾಡಿದ ಕ್ರೂರಿ ಚಂದ್ರಮೌಳಿ ಕಡೆಗೆ ಕೆಳಗೆ ಬಿದ್ದ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.

ಮೊನ್ನೆ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನದ ವೇಳೆ ಇನ್ನು ಹೀಗೆಲ್ಲಾ ಮಾಡಲ್ಲ ಎಂದವನು, ಠಾಣೆಯಿಂದ ಹೊರ ಬಂದು ನಿನ್ನ ಉಳಿಸೋದಿಲ್ಲ ಎಂದು ಮತ್ತೆ ಎಚ್ಚರಿಕೆ ನೀಡಿದ್ದನಂತೆ. ಭಯದಿಂದ ತವರು ಮನೆಗೆ ಹೋಗಿದ್ದ ಅಂಬಿಕಾ ಇಂದು ಬೆಳಿಗ್ಗೆ ಅಮ್ಮನ ಮನೆಯಿಂದಲೇ ಹಾಸನದತ್ತ ಹೊರಟಿದ್ದಾಳೆ. ಹಾಸನಕ್ಕೆ ಹೊರಟಿದ್ದವಳಿಗೆ ಫೋನ್ ಮಾಡಿದ್ದ ಚಂದ್ರಮೌಳಿ ಲೋನ್ ಆಗಿದೆ ಬೇಗಾ ಬಾ ಒಡವೆ ಬಿಡಿಸಿಕೊಳ್ಳೋಣ ಎಂದಿದ್ದಾನೆ.
ಹೇಗೋ… ಒಳ್ಳೇ ಬುದ್ಧಿ ಬಂದಿದ್ಯಲ್ಲಾ. ಗಿರವಿ ಇಟ್ಟಿರೋ ತನ್ನ ಚಿಕ್ಕಮ್ಮನ ಒಡವೆಯನ್ನ ಬಿಡಿಸಿ ಕೊಡೋಣ ಎಂದು ಹಾಸನಕ್ಕೆ ಹೊರಟಿದ್ದ ಅಂಬಿಕಾ ವಾಪಸ್ ಬಂದು ಈತನ ಜೊತೆ ಹೊರಟಿದ್ದಾಳೆ. ಒಡವೆ ಗಿರವಿ ಇಟ್ಟಿದ್ದ ಚೀಟಿ ಮನೆಯಲ್ಲಿದೆ ತರೋಣ ಬಾ ಎಂದು ಹೊಳೆನರಸೀಪುರದಿಂದ ವಾಪಸ್ ಊರಿನತ್ತ ಕರೆದೊಯ್ದಿದ್ದಾನೆ. ಹೊಳೆನರಸೀಪುರದಿಂದ ಪೆದ್ದನಹಳ್ಳಿ ಗೇಟ್ ಬಳಿ ವರೆಗೆ ಬಸ್ ನಲ್ಲಿ ಹೋಗಿ ಅಲ್ಲಿಂದ ತಮ್ಮೂರಿಗೆ ಕಾಲು ದಾರಿಯಲ್ಲಿ ನಡೆದು ಹೋಗೋಣ ಎಂದು ಕರೆದೊಯ್ದಿದ್ದಾನೆ.

ನಡೆದು ಹೋಗುವಾಗ ದಾರಿ ಮಧ್ಯೆ ಸಿಕ್ಕಿದ ಅರಣ್ಯದಲ್ಲಿ ಯಾರೂ ಇಲ್ಲದ ಸಮಯ ನೋಡಿ ಪತ್ನಿಯನ್ನ ಕೆಳಗಿಳಿಸಿ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನೀಚ ಅಲ್ಲಿಂದ ಸೀದಾ ಪೊಲೀಸ್ ಠಾಣೆಗೆ ಬಂದು ಮೊನ್ನೆ ಗಲಾಟೆ ಆಗಿದ್ದ ವಿಚಾರ ಹೇಳಿ ಆಕೆಯನ್ನ ಕೊಲೆ ಮಾಡಿ ಬಂದಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ!

ಕೂಡಲೆ ಆರೋಪಿ ಪತಿಯನ್ನು ವಶಕ್ಕೆ ಪಡೆದುಕೊಂಡ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಆತನೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ನಡೆದಿರೋ ಭೀಕರ ಹತ್ಯೆ ಪ್ರಕರಣ ಖಾತ್ರಿಯಾಗಿದೆ. ಇದೀಗ ಕೊಲೆ ಕೇಸ್ ದಾಖಲಿಸಿಕೊಂಡಿರೊ ಪೊಲೀಸರು ತನಿಖೆ ಕೈಗೊಂಡಿದ್ದಾರೆ, ಮದುವೆಯಾದ ಹತ್ತು ವರ್ಷದಿಂದಲೂ ಇದೇ ರೀತಿಯಲ್ಲಿ ಕಿರುಕುಳ ಕೊಟ್ಟು ನಮ್ಮ ಮಗಳನ್ನ ಕೊಂದಿದ್ದಾನೆ. ಇಬ್ಬರು ಪುಟ್ಟ ಪುಟ್ಟ ಮಕ್ಕಳು ಅನಾಥವಾಗಿದ್ದಾರೆ, ವಿನಾಕಾರಣ ಪತ್ನಿಯನ್ನ ಕೊಂದ ಪಾಪಿಗೆ ಕಠಿಣ ಶಿಕ್ಷೆ ಆಗಬೇಕು, ಮಕ್ಕಳ ಭವಿಷ್ಯ ರೂಪಿಸಲು ಬೇಕಾದ ವ್ಯವಸ್ಥೆ ಆಗಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ಒಟ್ನಲ್ಲಿ ನಿತ್ಯ ಕೆಲಸಕ್ಕೆ ಹೋಗೋ ಪತ್ನಿ ಮೇಲೆ ವಿನಾಕಾರಣ ಅನುಮಾನದ ಪೀಡೆಯನ್ನು ನೆತ್ತಿಗೇರಿಸಿಕೊಂಡು ಆಕೆಯನ್ನ ಹಿಂಬಾಲಿಸೋಕೆ ಶುರು ಮಾಡಿದ್ದ ಪತಿರಾಯ ಕಡೆಗೆ ಆಕೆಯ ನಡತೆ ಬಗ್ಗೆಯೇ ಅನುಮಾನಗೊಂಡು ಆಕೆಯನ್ನ ಬರ್ಬರವಾಗಿ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

Related posts

Leave a Comment