ನೆಲಮಂಗಲ: ತಾಲೂಕಿನ ದಾಬಸ್‌ಪೇಟೆಯ ಬಸ್ ನಿಲ್ದಾಣ ಶಿಥಿಲಗೊಂಡಿದ್ದು ದುರಸ್ತಿ ಮಾಡಿ ಪ್ರಯಾಣಿಕರಿಗೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಜ.೫ರಂದು ದಾಬಸ್‌ಪೇಟೆಯ ನಿಲ್ದಾಣದಲ್ಲಿ ಶಾಂತಿಯುತ ಧರಣಿ ನಡೆಸಲಾಗುತ್ತಿದೆ ಎಂದು ಬಿಜೆಪಿ ತಾಲೂಕು ಅದ್ಯಕ್ಷ ಜಗದೀಶ್‌ಚೌಧರಿ ತಿಳಿಸಿದರು.
ನಗರದ ಅರಿಶಿನಕುಂಟೆ ಗ್ರಾಮದ ಬಳಿಯ ಹಾಲಿಡೇ ಪಾರ್ಮ್ ಹೋಟೆಲ್‌ನಲ್ಲಿ ಅಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ದಾಬಸ್‌ಪೇಟೆ ಬಸ್ ನಿಲ್ದಾಣದಲ್ಲಿ ದೊಡ್ಡಬಳ್ಳಾಪುರ, ಮಾಗಡಿ, ಕೊರಟಗೆರೆ, ತುಮಕೂರು ಸೇರಿದಂತೆ ನೆಲಮಂಗಲದಿAದಲ್ಲೂ ನಿತ್ಯ ನೂರಾರು ಬಸ್ ಸಂಚಾರ ಮಾಡುತ್ತಿದ್ದು ಸಾವಿರಾರು ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಬಸ್ ನಿಲ್ದಾಣ ಶಿಥಿಲವಾಗಿದ್ದು ಪ್ರಯಾಣಿಕರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಪ್ರಾಯಣಿಕರಿಗೆ ನೆರಳು ನೀಡಬೇಕಾಗಿದ್ದ ನಿಲ್ದಾಣಗಳು ಶಿಥಿಲಾವಸ್ಥೆಗೆ ತಲುಪಿದ್ದು, ಪ್ರಯಾಣಿಕರಲ್ಲಿ ಜೀವ ಭಯ ಹುಟ್ಟಿಸಿದೆ. ಪ್ರಯಾಣಿಕರಿಗೆ ಕೂರಲು ಮಾಡಿದ ಹಾಸನಗಳು ವ್ಯವಸ್ಥೆಯಿಲ್ಲ. ನಿಲ್ದಾಣದ ಚಾವಣಿ ಸಿಮೆಂಟ್ ಪದರು ಕಳಚಿ ಬೀಳುತ್ತಿವೆ. ಚಾವಣಿಯ ಕಬ್ಬಿಣದ ರಾಡ್‌ಗಳು ಹೊರಗಡೆ ಕಾಣುತ್ತಿವೆ. ಇದರಿಂದಾಗಿ ಜನರು ನಿಲ್ದಾಣದ ಒಳಗೆ ನಿಲ್ಲಲು ಹಿಂಜರಿಯುತ್ತಿದ್ದಾರೆ. ಸಿಮೆಂಟಿನ ಆಯುಷ್ಯ ಮುಗಿದಿದ್ದರಿಂದ ಗೋಡೆಯ ಕಲ್ಲುಗಳು ಬೀಳುತ್ತಿವೆ. ಪ್ರಯಾಣಿಕರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಬಸ್ ನಿಲ್ದಾಣದಲ್ಲಿ ಕನಿಷ್ಠ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂಲ ಸೌಕರ್ಯಗಳಿಲ್ಲ. ನಿತ್ಯ ಮಹಿಳೆಯರು, ಹೆಣ್ಣು ಮಕ್ಕಳು, ವೃದ್ಧರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣವನ್ನು ದುರಸ್ತಿ ಮಾಡಿಸುವಂತೆ ಅಧಿಕಾರಿಗಳಿಗೆ, ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಎಂದು ಜನರ ಕಣ್ಣು ಒರೆಸುವ ಕೆಲಸ ಮಾಡುತ್ತಿದ್ದು ಬಸ್ ನಿಲ್ದಾಣದ ಕಾಮಗಾರಿ ಆರಂಭಗೊAಡಿಲ್ಲ. ಜತೆಗೆ ಹೈಟೆಕ್ ಬಸ್ ನಿಲ್ದಾಣ ಮಾಡುತ್ತಿರುವುದು ಸಂತೋಷಕರ ಸಂಗತಿ. ಹೈಟೆಕ್ ಬಸ್ ನಿಲ್ದಾಣ ಮಾಡುವವರೆಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಧರಣಿ: ಜ.೦೫ರಂದು ಭಾನುವಾರ ಸಂಜೆ ೬ ಗಂಟೆ ದಾಬಸ್‌ಪೇಟೆ ಬಸ್ ನಿಲ್ದಾಣದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ಸುಮಾರು ೨೦೦ಕ್ಕೂ ಹೆಚ್ಚು ಮಂದಿ ಬಸ್ ನಿಲ್ದಾಣದಲ್ಲಿ ಧರಣಿ ಮಾಡಿ ಬಳಿಕ ಬಸ್ ನಿಲ್ದಾಣದಲ್ಲೇ ಮಲಗುತ್ತೇನೆ. ಧರಣಿ ಕುರಿತು ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಅದ್ಯಕ್ಷ ಜಗದೀಶ್‌ಚೌಧರಿ ಮಾಹಿತಿ ನೀಡಿದರು.
ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಮಾಜಿ ಅದ್ಯಕ್ಷ ಮುರುಳೀದರ್, ಚಲನಚಿತ್ರ ನಿರ್ಮಾಪಕ ನಾಗರಾಜು, ಮುಖಂಡ ಸಿದ್ದು, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.