ಡಾ|| ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ DR B.R Ambedkar Life History

 • ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು.

 • ಇವರ ಅಜ್ಜ ಮಾಲೋಜಿ ಸಕ್ಪಾಲ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬಾಂಬೆ ಸೇನೆಯಲ್ಲಿ ಸೇರಿ, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಇವರಿಗೆ ಇಬ್ಬರು ಮಕ್ಕಳು ರಾಮಜಿ ಸಕ್ಪಾಲ್, ಮೀರಾ ಸಕ್ಪಾಲ್. ರಾಮಜಿ ಸಕ್ಪಾಲ್ ಅವರ ಹೆಂಡತಿ ಭೀಮಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರು.

 • ಇವರ ತಂದೆ ಹಾಗೂ ಆರು ಜನ ಚಿಕ್ಕಪ್ಪಂದಿರು, ಸೈನ್ಯದಲ್ಲಿ ಸುಬೇದಾರರಾಗಿದ್ದರು.ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು. ಇವರಿಗೆ 14 ಮಕ್ಕಳು ಹುಟ್ಟಿದರು. ಈ 14ನೇ ಮಗುವೇ ಅಂಬೇಡ್ಕರ್. ಅಂಬೇಡ್ಕರ್ ಅವರ ಮೊದಲ ಹೆಸರು ಭೀಮರಾವ್ ಆಗಿತ್ತು. ಡಾ. ಅಂಬೇಡ್ಕರರು ನಾನು ನನ್ನ ತಂದೆ ತಾಯಿಯರಿಗೆ 14 ನೇ ರತ್ನನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

 • ರಾಮಜಿ ಸಕ್ಪಾಲ್ ರವರಿಗೆ 14 ಮಕ್ಕಳಲ್ಲಿ ಬದುಕುಳಿದ್ದಿದ್ದು 5 ಜನ ಮಕ್ಕಳು , ಅವರು ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಮತ್ತು ಭೀಮರಾವ್. ಭೀಮರಾವ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಇವರು 14 ವರ್ಷಗಳವರೆಗೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಇವರು ಮರಾಠಿ, ಹಿಂದಿ ಭಾಷೆಯಲ್ಲಿ ಪ್ರಬುದ್ಧ ಜ್ಞಾನ ಹೊಂದಿದ್ದರು.

 • ಜೊತೆಗೆ ಆಂಗ್ಲ ಭಾಷೆಯನ್ನು ಬಲ್ಲವರಾಗಿದ್ದರು. ಮಕ್ಕಳಲ್ಲಿ ದೇಶಭಕ್ತಿ, ಜ್ಞಾನ, ಹಾಗೂ ಧರ್ಮದ ಬಗ್ಗೆ ತಿಳಿಹೇಳಿಕೊಡುವಲ್ಲಿ ಸಫಲರಾದರು. ಮುಂದೆ ಭೀಮರಾವ್ ರವರು ಉತ್ತಮ ಸಂಸ್ಕೃತಿ ಹೊಂದಲು ತಂದೆಯವರು ಹೇಳಿಕೊಟ್ಟ ನೀತಿ ಪಾಠ ಸಹಾಯಕವಾಯಿತು. ಇವರು ಕಬೀರ ಪಂಥದವರು, ಕಬೀರರ ಧೋಹೆಗಳು, ರಾಮಾಯಣ, ಮಹಾಭಾರತದ ಕತೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು.

 • ರಾಮಜಿ ಸಕ್ಪಾಲ್ ರವರು ಮಿಲಿಟರಿ ಸೇವೆಯಿಂದ ನಿವೃತ್ತಿಯಾದ ನಂತರ ಡಾಪೋಲಿಗೆ ಬಂದರು. ಆದರೆ ಕೆಲವೇ ದಿನಗಳಲ್ಲಿ ಮಿಲಿಟರಿ ಕ್ವಾರ್ಟಸ್ನಲ್ಲಿ ಅವರಿಗೆ ಸೇವೆ ಸಿಕ್ಕ ಕಾರಣ ‘ಸಾತಾರ’ಕ್ಕೆ ಕುಟುಂಬ ವರ್ಗಾಯಿಸಿದರು. ಭೀಮರಾವ್ ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಭೀಮರಾವ್ ಆರು ವರ್ಷದ ಬಾಲಕನಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ.

 • ಈ ಕಾರಣಕ್ಕಾಗಿ ಭೀಮರಾವ್ ರು ತನ್ನ ತಾಯಿಯ ಮಮತೆ ತನ್ನ ಅತ್ತೆಯಾದ ಮೀರಾಳಲ್ಲಿ ಕಂಡುಕೊಳ್ಳುತ್ತಾರೆ. ಮೀರಾ ಕರುಣೆಯ ಮೂರ್ತಿಯಾಗಿದ್ದಳು, ಗೂನುಬೆನ್ನಿನಿಂದಾಗಿ ಮದುವೆ ಯಾಗದೆ ತನ್ನ ಅಣ್ಣನ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಸರ್ವಸ್ವವನ್ನೂ ಕಂಡುಕೊಳ್ಳುವಳು. ಭೀಮರಾವ್ ರವರಿಗೆ ಪ್ರಾಥಮಿಕ ಶಾಲೆಯಲ್ಲಿಯೇ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಿಕ್ಷಕರು ಮತ್ತು ಸಹಪಾಠಿಗಳು ಇವರು ದಲಿತ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಸೇರುತ್ತಿರಲ್ಲಿಲ್ಲ.

 • ಅದಕ್ಕಾಗಿ ತರಗತಿಯ ಹೊರಗಡೆ ಕುಳಿತುಕೊಂಡು ಕಲಿಯಬೇಕಾಯಿತು. ಪ್ರಾಥಮಿಕ ಶಾಲೆಯಲ್ಲಿ ಎಲ್ಲರ ಅಸಹ್ಯದಿಂದಾಗಿ ಶಿಕ್ಷಣದಲ್ಲಿ ಅವರಿಗೆ ಹೆಚ್ಚು ಒಲವೇ ಇರಲಿಲ್ಲ. ಧ್ಯಾನ ಮಾಡುವುದು, ಮೇಕೆಯೊಡನೆ ಆಟವಾಡುವುದು ಅವರ ಹವ್ಯಾಸಗಳಾಗಿದ್ದವು. ಈ ಮಧ್ಯ ರಾಮಜಿ ಸಕ್ಪಾಲ್ ರವರು ಸಂಸಾರದ ನಿರ್ವಹಣೆಗಾಗಿ ಇನ್ನೊಂದು ಮದುವೆಯಾದರು.

 • ಮಲತಾಯಿ ತನ್ನ ತಾಯಿಯ ಬಟ್ಟೆ ಹಾಗೂ ಒಡವೆಗಳನ್ನು ಹಾಕಿಕೊಂಡಾಗ, ಅದಕ್ಕಾಗಿ ತಂದೆ, ಅತ್ತೆಯೊಂದಿಗೆ ಜಗಳವಾಡುತ್ತಿದ್ದರು. ಸೋದರತ್ತೆ ವಾತ್ಸಲ್ಯದಿಂದ ಮಲತಾಯಿಯ ಅನಿವಾರ್ಯತೆಯ ಬಗ್ಗೆ ತಿಳಿ ಹೇಳಿದರು ಆದ್ರೂ ಸಹ ಸೋದರತ್ತೆಯ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಮನೆಯಲ್ಲಿ ಬದುಕುವುದು ಬೇಡ ಎಂದು ನಿರ್ಧರಿಸಿ ತನ್ನ ರೊಟ್ಟಿಯನ್ನು ತಾನೇ ಸಂಪಾದಿಸಿಕೊಳ್ಳಬೇಕೆಂದು ನಿರ್ಧರಿಸಿದರು.

 • ತನ್ನ ವಯಸ್ಸಿನವರು ಬಾಂಬೆಯ ಬಟ್ಟೆಯ ಮಿಲ್ಲಿನಲ್ಲಿ ಕಾರ್ಮಿಕರಾಗಿ ದುಡಿಯಬೇಕೆಂದು ನಿರ್ಧರಿಸಿ ಬಾಬ್ ಗೆಗೋಗಳು ಬೇಕಾಗುವ ಹಣವನ್ನು ತನ್ನ ಅತ್ತೆಯ ಪರ್ಸ್ ನ್ನು ಮುರು ದಿನ ರಾತ್ರಿ ಎದ್ದು ಹಣವನ್ನು ಕದಿಯಲು ಪ್ರಯತ್ನಿಸುತ್ತಾರೆ ಆದ್ರೆ ನಾಲ್ಕನೇ ದಿನ ರಾತ್ರಿ ಪರ್ಸ್ ಕದ್ದು ಅದ್ರಲ್ಲಿ ಕೇವಲ ಅರ್ಧ ಆಣೆ ಇದ್ದು, ಬಾಂಬೆಗೆ ರೈಲಿನ ಟಿಕೇಟು ಮೂರು ಆಣೆ ಇರುತ್ತದೆ ಕದ್ದ ಹಣದಿಂದ ಬಾಂಬೆಗೆ ಹೋಗಲು ಸರಿಹೋಗುವುದಿಲ್ಲ.

 • ಇದರಿಂದ ನೊಂದು ತನ್ನ ನಿರ್ಧಾರ ಬದಲಿಸಿ ಹೆಚ್ಚಿಗೆ ಓದಬೇಕೆಂದು ನಿರ್ಧರಿಸಿ ಓದುವ ಆಸೆ ಹೆಚ್ಚಿಸಿಕೊಳ್ಳುತ್ತಾರೆ. ಸತಾರ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವಾಗ ಮಹಾರ ಎಂಬ ಅಸ್ಪೃಶ್ಯರದವರೆಂಬ ಕಾರಣಕ್ಕಾಗಿ ಹೆಚ್ಚು ಕಡಿಮೆ ಎಲ್ಲ ಶಿಕ್ಷಕರು ಇವರನ್ನು ಅಸಹ್ಯವಾಗಿ ನೋಡುತ್ತಿದ್ದರು. ಯಾರೂ ಇವರ ಪ್ರತಿಭೆ ಗುರುತಿಸಲಿಲ್ಲ.

 • ಆದರೆ ಅಲ್ಲಿನ ಶಿಕ್ಷಕರಲ್ಲಿ ಒಬ್ಬರಾದ ಫೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ,ಕಲಿಯುವ ಹಂಬಲ,ಸೂಕ್ಷ್ಮಬುದ್ಧಿಶಕ್ತಿಯನ್ನು ಗುರುತಿಸಿ ಇವರಿಗೆ ಪ್ರೋತ್ಸಾಹಿಸಿದರು. ಜಾತಿಯಲ್ಲಿ ಆ ಶಿಕ್ಷಕರು ಬ್ರಾಹ್ಮಣರಾಗಿದ್ದರೂ ಕೂಡ ತಾವು ಊಟಕ್ಕೆ ತಂದಿದ್ದ ಬುತ್ತಿಯಲ್ಲಿ ಭೀಮರವರಿಗೆ ಒಂದಿಷ್ಟು ಕೊಟ್ಟು ಪ್ರೀತಿಯಿಂದ ಊಟ ಮಾಡಿಸುತ್ತಿದ್ದರು.

 • ಇದೇ ಫೆಂಡೆಸೆ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಅವರ ಅಡ್ಡ ಹೆಸರಿಗೆ ಬದಲಿಸಿ ಕೊಟ್ಟರು ಅಂದರೆ ಹಾಜರಿಯಲ್ಲಿ ಅವರ ಹೆಸರು ಭೀಮರಾವ್ ರಾಮಜಿ ಅಂಬೆವಾಡ್ಕರ್ ಎಂದು ಇದ್ದು, ಶಿಕ್ಷಕರು ಅದನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ತಿದ್ದಿದರು ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು.

 • ಪ್ರಾಥಮಿಕ ಶಿಕ್ಷಣ ಹಲವಾರು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸುತ್ತಾರೆ. ಸಾತರದಂತೆ, ಇವರಿಗೆ ಹೆಚ್ಚು ಶೋಷಣೆ ಅನ್ಯಾಯ ಚುಚ್ಚು ಮಾತು ಅಪಮರ್ಯಾದೆ ಇರಕ್ಕಿಲ್ಲ ಎಂಬ ಭಾವನೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆ ಪರೇಲ ಎಂಬಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಶಾಲೆಗೆ ಸೇರಿಸುತ್ತಾರೆ.

 • ಆದರೆ ಶಾಲೆಗೆ ಸೇರುವ ಸಂಧರ್ಭದಲ್ಲಿಯೇ ಇವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಾಲೆಯಲ್ಲಿ ಮೊದಲನೆಯ ಭಾಷೆ ಮರಾಠಿಯಾಗಿಯೂ,ಎರಡನೆಯ ಭಾಷೆ ಸಂಸ್ಕೃತ ಕಲಿಯಲು ಇಚ್ಛಿಸುತ್ತಾರೆ. ಆದರೆ ಸಂಸ್ಕೃತ ಶಿಕ್ಷಕರು ಇವರಿಗೆ ಸಂಸ್ಕೃತ ಕಲಿಸಲು ನಿರಾಕರಿಸುತ್ತಾರೆ.ಅದಕ್ಕಾಗಿಯೇ ಅನಿವಾರ್ಯವಾಗಿ ಪಾರ್ಸಿ ಭಾಷೆಯನ್ನು ಕಲಿಸಲು ನಿರ್ಧರಿಸುತ್ತಾರೆ.

 • ಒಂಬತ್ತನೆಯ ತರಗತಿಯಲ್ಲಿಯೂ ಇವರಿಗೆ ಅಸ್ಪೃಶ್ಯತೆಯು ಸಿಗುತ್ತದೆ. ಶಿಕ್ಷಕರು ಬೋರ್ಡ್ ಮೇಲೆ ಹಾಕಲಾಗಿದ್ದ ಬೀಜಗಣಿತದ ಲೆಕ್ಕ ಶಾಲೆಯ ಯಾವ ವಿದ್ಯಾರ್ಥಿ ಕೂಡ ಬಿಡಿಸದಿದ್ದಾಗ ಭೀಮರಾವ್ ರು ಬಿಡಿಸಲು ಬರುತ್ತಾರೆ. ಶಾಲೆಯ ಶಿಕ್ಷಕರು ಅನುಮತಿ ನೀಡುತ್ತಾರೆ . ಆದರೆ ವಿದ್ಯಾರ್ಥಿಗಳು ತಮ್ಮ ಊಟದ ಬುತ್ತಿ ಬೋರ್ಡಿನ ಹಿಂದುಗಡೆ ಇಟ್ಟಿರುವುದರಿಂದ ಮಹಾರ ವಿದ್ಯಾರ್ಥಿ ಬೋರ್ಡ್ ಮುಟ್ಟಿದರೆ ಬುತ್ತಿ ಅಸ್ಪೃಶ್ಯವಾಗುತ್ತದೆ ಎಂದು ನಿರಾಕರಿಸಿದರು.

 • ಇಂತಹ ಕಹಿ ಅನುಭವಗಳ ಮಧ್ಯಯೇ ಡಾ. ಅಂಬೇಡ್ಕರ್ 1907ರಲ್ಲಿ 10ನೆ ತರಗತಿಯಲ್ಲಿ ಪಾಸಾಗುತ್ತಾರೆ. ಒಟ್ಟು 750 ಅಂಕಗಳಿಗೆ 282 ಅಂಕ ಪಡೆದರು. ಅಸ್ಪೃಶ್ಯರಲ್ಲಿಯೇ ಇವರು ಇಷ್ಟು ಅಂಕಗಳನ್ನು ಪಡೆದು ಪಾಸಾದ ಮೊದಲನೇ ವಿದ್ಯಾರ್ಥಿ ಯಾಗುತ್ತಾರೆ. ಅಸ್ಪೃಶ್ಯರ ವರ್ಗದವರು ಈ ಬಾಲಕನಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲು ಆಗಿನ ಸಮಾಜ ಸುಧಾರಕರಾದ ಎಸ್ ಕೆ ಭೋಲೆಯವರು ನಿರ್ಧರಿಸುತ್ತಾರೆ.

 • ಸರಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಕೆ ಎ ಕೆಲಸ್ಕರ್ ರವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಕೆ ಎ ಕೆಲಸ್ಕರ್ ರವರು ಅಂಬೇಡ್ಕರ್ ರವರನ್ನು ತುಂಬು ಹೃದಯದಿಂದ ಅಭಿನಂದಿಸಿ, ನೀವು ನಿಮ್ಮ ಸಮಾಜದ ಮತ್ತು ಭಾರತದ ಸುಧಾರಕರಾಗಬೇಕೆಂದು ಹರಸುತ್ತಾರೆ. ಮತ್ತು ಉನ್ನತ ವ್ಯಾಸಂಗಕ್ಕೆ ತಮ್ಮ ಕೈಲಾದ ಸಹಾಯ ಮಾಡುವೆವೆಂದು ಪ್ರೋತ್ಸಾಹಿಸುತ್ತಾರೆ. ತಾವೇ ಬರೆದ ಭಗವಾನ್ ಬುದ್ಧನ ಚರಿತ್ರೆಯ ಪುಸ್ತಕವನ್ನು ಭೀಮರಾವರವರಿಗೆ ಕಾಣಿಕೆ ನೀಡುತ್ತಾರೆ. ಡಾ.ಅಂಬೇಡ್ಕರ್ ರವರು ಬೌದ್ಧ ಧರ್ಮಕ್ಕೆ ಒಲಿಯಲು ಈ ಪುಸ್ತಕವೇ ಪ್ರೋತ್ಸಾಹ ಕೊಡುತ್ತದೆ.

 • ಅಂಬೇಡ್ಕರ್ ಅವರು 10 ನೇ ತರಗತಿ ಪಾಸಾದ ನಂತರ ಇವರ ಮನೆಯವರು ಡಾಪೋಲಿಯ ಬಿಕ್ಕು ವಾಲಂಗಕರ್ರವ ಎರಡನೆಯ ಪುತ್ರಿ ರಮಾಬಾಯಿಯವರೊಂದಿಗೆ ಮದುವೆ ಮಾಡುತ್ತಾರೆ. ಆಗ ಅವರಿಗೆ 17 ವರ್ಷ ರಮಾಬಾಯಿಯವರಿಗೆ 9 ವರ್ಷ ವಯಸ್ಸಾಗಿತ್ತು.

 • ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್ ಸ್ಟನ್ ಸೇರಿದ ಅಂಬೇಡ್ಕರ್ 1912 ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ. ಇವರಿಗೆ ಕೆ.ಎ ಕೆಲಸ್ಕರ್‍ರವರು ಪಿಯುಸಿ ಮತ್ತು ಬಿ ಎ ವ್ಯಾಸಂಗಕ್ಕಾಗಿ ಬರೊಡದ ಮಹಾರಾಜರಿಂದ ತಿಂಗಳಿಗೆ 25 ರೂಪಾಯಿಗಳ ಶಿಕ್ಷಣ ವೇತನವನ್ನು ಕೊಡಿಸುತ್ತಾರೆ.

 • ಬಿ ಎ ಓದುವಾಗ ಪ್ರೊ ಮುಲ್ಲರ್ ಎಂಬುವರು ಹೆಚ್ಚು ಪ್ರೋತ್ಸಾಹವನ್ನು ಕೊಟ್ಟಿರುತ್ತಾರೆ. ಅದಕ್ಕಾಗಿ ಡಾ. ಅಂಬೇಡ್ಕರ್ ರವರಿಗೆ ಇವರು ಆದರ್ಶರಾಗಿರುತ್ತಾರೆ. ಮೊದಲೇ ಸಯ್ಯಾಜಿರಾವ್ ಗಾಯಕವಾಡರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಬಿ ಎ ಮುಗಿದ ನಂತರ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಮಿಲಿಟರಿ ಲೆಫ್ಟಿನೆಂಟ್ ಆಗಿ ನೇಮಕವಾಗುತ್ತಾರೆ.ಆದರೆ ಅವರು ಅಲ್ಲಿ ಹೆಚ್ಚು ಕಾಲ ಕೆಲಸ ಮಾಡಲಿಲ್ಲ.

 • ಕೇವಲ 15 ದಿನಗಳ ಕೆಲಸ ಮಾಡಿದರು,ತಂದೆ ಅನಾರೋಗ್ಯದಿಂದಿದ್ದಾರೆ ಎಂಬ ಟೆಲಿಗ್ರಾಮ್ ಬಂದಾಗ ಅವರು ಬರೋಡಾದಿಂದ ಬಾಂಬೆಗೆ ಬರುತ್ತಾರೆ.ತಂದೆ ಅಂತಿಮ ಕ್ಷಣ ಎಣಿಸುತ್ತಿದ್ದರು. ಬಂದ ಮಗನ ಮೈ ಮೇಲೆ ಕೈ ಎಳೆದು ಏನೋ ಹೇಳಲು ತಡವರಿಸಿ ಏನೂ ಹೇಳಲಾಗದೆ, ಫೆಬ್ರವರಿ 2 1913ಕ್ಕೆ ಪ್ರಾಣಬಿಟ್ಟರು. ತಂದೆ ಅಂತ್ಯಕ್ರಿಯೆಗಳನ್ನು ಮುಗಿಸಿದ ಡಾ. ಅಂಬೇಡ್ಕರರು ಮುಂದೆ ಏನು ಎಂಬ ಪ್ರಶ್ನೆಹಾಕಿಕೊಂಡು ಉನ್ನತ ವ್ಯಾಸಂಗ ಮಾಡಲು ನಿರ್ಧರಿಸುತ್ತಾರೆ.

 • ಇದೇ ಸಂಧರ್ಭದಲ್ಲಿ ಬರೋಡಾದ ಮಹಾರಾಜರು ಯೋಗ್ಯ ವಿದ್ಯಾರ್ಥಿಗಳಿಗೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಷ್ಯವೇತನ ಘೋಷಣೆ ಮಾಡುತ್ತಾರೆ. ಶಿಕ್ಷಕರಾದ ಕೆ. ಎ ಕೆಲಸ್ಕರ್ ರವರ ಜೊತೆಗೆ ಬರೋಡದ ಮಹಾರಾಜರಲ್ಲಿ ಬಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಪಡೆದು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಲು 1913ಕ್ಕೆ ಹೋಗುತ್ತಾರೆ.

 • ಅಲ್ಲಿ ಅರ್ಥಶಾಸ್ತ್ರ,ಸಮಾಜಶಾಸ್ತ್ರ,ಅತಿಹಾಸ,ತತ್ವಜ್ಞಾನ,ತರ್ಕಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಾರೆ. 1915ರಲ್ಲಿ ಪ್ರಾಚೀನ ಭಾರತದ ವಾಣಿಜ್ಯ ಪ್ರಬಂದ ಮಂಡಿಸಿ ಎಂ ಎ ಪದವಿ ಪಡೆದರು. ಅದೇ ವರ್ಷ ಅಂತಾರಾಷ್ಟ್ರೀಯ ಸಮಾಜ ಶಾಸ್ತ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಜಾತಿಗಳು ಎಂಬ ಪ್ರಬಂಧ ಮಂಡಿಸುತ್ತಾರೆ.

 • 1916ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನ ಎಂಬ ಪ್ರಬಂಧ ಮಾಫಿಸಿ ಅದೇ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿಯನ್ನು ಪಡೆದರು. 8 ವರ್ಷದ ನಂತರ ಇಂಗ್ಲೆಂಡಿನ ಪ್ರಕಾಶನ ಸಂಸ್ಥೆ ಎಸ್ ಪಿ ಅಂಡ್ ಸನ್ಸ್, ಭಾರತದಲ್ಲಿ ರಾಷ್ಟ್ರೀಯ ಹಣ ಕಾಸಿನ ವಿಕಾಸ ಎಂಬ ಶೀರ್ಷಿಕೆಯಲ್ಲಿ ಪುಸ್ತಕವೊಂದು ಪ್ರಕಟಿಸಿತು. ಅಮೆರಿಕಾದಲ್ಲಿ ಇವರ ಮೇಲೆ ಪ್ರಭಾವ ಬೀರಿದ ಶಿಕ್ಷಕರೆಂದರೆ ಎಡ್ವಿನ್ ಕ್ಯಾನಾನ್, ಆರ್ ಎ ಸಲಿಗಮ್,ಜಾನ್ ಡಿವೆ.

 • ಅಮೆರಿಕಾದಲ್ಲಿ ಎಂ ಎ ,ಪಿಎಚ್ ಡಿ,ಪಡೆದ ನಂತರ ಉನ್ನತ ವ್ಯಾಸಂಗ ಇಂಗ್ಲೆಂಡಿನಲ್ಲಿ ಮುಂದುವರೆಸಲು ಅಂಬೇಡ್ಕರರು ಅಮೆರಿಕಾದಿಂದ ಇಂಗ್ಲೆಂಡಿಗೆ ಹೋಗುತ್ತಾರೆ. ಅಲ್ಲಿ ಲಂಡನ್ನಿನ ಅರ್ಥಶಾಸ್ತ್ರ ರಾಜಕೀಯಶಸ್ತ್ರ ವಿಶ್ವವಿದ್ಯಾಲಯದಲ್ಲಿ ಡಿ ಎಸ್ ಸಿ ಪದವಿಗಾಗಿ ನೋಂದಾಯಿಸಿಕೊಳ್ಳುತ್ತಾರೆ, ಅಲ್ಲದೆ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿಗೆ ಹೆಚ್ಚುವರಿಯಾಗಿ ಸೇರುತ್ತಾರೆ.

 • ಆದರೆ 1916ರ ಹೊತ್ತಿಗೆ ಸಯ್ಯಾಜಿರಾವ್ ಗಾಯಕವಾಡ ರ ಶಿಷ್ಯವೇತನ ಅವಧಿ ಮುಗಿದಿದೆ ಹಿಂದಕ್ಕೆ ಮರಳಿ ಬರಲು ಹೇಳಿದಾಗ ಅಂಬೇಡ್ಕರ್ ರವರಿಗೆ ತೀರ ನೋವಾಗುತ್ತದೆ. ಆದರೂ ಅನಿವಾರ್ಯವಾಗಿ ತಮ್ಮ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ ಬರುತ್ತಾರೆ ಬರುವಾಗ ಅಂಬೇಡ್ಕರರು ತಮ್ಮ ಗುರುಗಳಿಗೆ ವಿನಂತಿಸಿ ತಮ್ಮ ಅಡ್ಮಿಷನ್ ರದ್ದು ಮಾಡದಂತೆ ಕೋರಿ ನಾಲ್ಕು ವರ್ಶದ ನಂತರ ಮರಳಿ ಬರುವುದಾಗಿ ಕೋರಿರುತ್ತಾರೆ.

 • ಪೂರ್ವ ನಿರ್ಧರಿತ ಒಪ್ಪಂದದಂತೆ,ಡಾ ಅಂಬೇಡ್ಕರ್ ರು ಬರೊಡದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಗಳಾಗಿ ಕೆಲಸಕ್ಕೆ ಸೇರಿದರು. ಮಹಾರಾಜರಿಗೆ ತಿಳಿಯದಂತೆ ಅಲ್ಲಿಯೇ ಆಸ್ಥಾನಿಕ ಹಿರಿಯ ಮಂತ್ರಿಗಳು ಇವರೊಂದಿಗೆ ಅಸ್ಪೃಶ್ಯ ಆಚರಣೆ ಮಾಡುತ್ತಿದ್ದರು.ಸಮಾನ್ಯ ಸಿಪಾಯಿ ಕೂಡ ಇವರ ಫೈಲುಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಉಳಿಯಲು ಆಸ್ಥಾನದಲ್ಲಿ ನಿವೇಶನ ನೀಡಲಿಲ್ಲ ಮತ್ತು ಉಳಿದಿದ್ದ ಪಾರ್ಸಿ ಹೊಟೇಲ್ ನಿಂದ ಇವರನ್ನು ದಬ್ಬಿ ಹೊರಹಾಕಿದರು.

 • ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಲಾಗದೆ ಬಾಂಬೆಗೆ ಬಂದರು. ಬಂದು ಕೆಲವು ದಿನಗಳಲ್ಲಿ ಅವರ ಮಲತಾಯಿ ಮರಣಹೊಂದುತ್ತಾರೆ. ಅಂಬೇಡ್ಕರರು ಸಿಡ್ಯಾಮ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರುತ್ತಾರೆ. ಈ ಸರಕಾರಿ ಕಾಲೇಜಿನಲ್ಲಿಯೂ ಕೂಡ ಇವರ ಜೊತೆಗೆ ಅಸ್ಪೃಶ್ಯರ ಆಚರಣೆ ಮಾಡುತ್ತಾರೆ.

 • ಇವರ ಸಹಪಾಠಿಗಳು, ಪಾಠಮಾಡಿ ಉಪನ್ಯಾಸಕರಿಗಾಗಿ ಕುಡಿಯಲು ಇಟ್ಟ ನೀರಿನ ಪಾತ್ರೆಯಿಂದ ಅಂಬೇಡ್ಕರರು ನೀರನ್ನು ಕುಡಿದಾಗ ಗುಜರಾತ್ ನ ಉಪನ್ಯಾಸಕರೊಬ್ಬರು ಅಕ್ಷೇಪಿಸುತ್ತಾರೆ. ಮುಂದೆ 1920ರಲ್ಲಿ ಮುಖನಾಯಕ ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ಈ ಅವಧಿಯಲ್ಲಿ ಅಂಬೇಡ್ಕರ್ ರವರಿಗೆ ಕೊಲ್ಲಾಪುರದ ಸಾಹೋ ಮಹಾರಾಜರು ಅಂಬೇಡ್ಕರವರ ಉನ್ನತ ವ್ಯಾಸಂಗಕ್ಕೆ ಶಿಷ್ಯವೇತನ ನೀಡಲು ಮುಂದಾಗುತ್ತಾರೆ.

 • ಹೇಗೂ ಅಂಬೇಡ್ಕರ್ ರವರು ಕಾಲೇಜಿನಲ್ಲಿ ಉಪನ್ಯಾಸ ಮಾಡಿ ಕೂಡಿಟ್ಟ ಸ್ವಲ್ಪ ಹಣ, ಸಾಹು ಮಹಾರಾಜರಿಂದ ಶಿಷ್ಯವೇತನ ಹಾಗೂ ಆತ್ಮೀಯ ಪಾರ್ಸಿ ಗೆಳೆಯ ನವಲಭೆತನಿಂದ ಸ್ವಲ್ಪ ಹಣ ಸಾಲ ಪಡೆದು ಅಂಬೇಡ್ಕರರವರು ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೆ ಹೋದರು. ಅಲ್ಲಿ 1920ರಲ್ಲಿ ಲಂಡನ್ ಸ್ಕೂಲ್ ಆಫ್ ಏಕನಿಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ವಿಶ್ವವಿದ್ಯಾಲಯದಲ್ಲಿ ಎಂ ಎಸ್ ಸಿ ಪದವಿಗಾಗಿ ನೊಂದಾಯಿಸಿಕೊಂಡು ಹಗಲು ರಾತ್ರಿ ಅಧ್ಯಯನ ಮಾಡುತ್ತಾರೆ.

 • ಸ್ವಲ್ಪ ಹಣವಿರುವುದರಿಂದ ಅತ್ಯಧಿಕ ಕಷ್ಟ ಪಟ್ಟು ಅರ್ಧ ಬ್ರೆಡ್ ಒಂದು ದಿನಕ್ಕೆ ಊಟ ಮಾಡಿ ಲಂಡನ್ನಿನ ಮ್ಯೂಸಿಯಂ ಎಂಬ ಗ್ರಹಾಲಯದಲ್ಲಿ ದಿನದ 18 ಗಂಟೆಗಳ ಕಾಲ ಅದ್ಯಯನ ಮಾಡಿ ,1921 ರಲ್ಲಿ ಪ್ರೊ ಎಡ್ವಿನ್ ಕ್ಯಾನನ ರವರ ಮಾರ್ಗದರ್ಶನದಲ್ಲಿ ಬ್ರಿಟಿಷ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ. ಎಂಬ ಪ್ರಬಂಧ ಮಂಡಿಸಿ, ಎಂ ಎಸ್ ಸಿ ಪದವಿಪಡೆಯುತ್ತಾರೆ.

 • ಇವರು ಇದೇ ರೀತಿ ವಿದ್ಯಾರ್ಜನೆ ಮಾಡಿ 1921ರಲ್ಲಿ ಡಿ.ಎಸ್ ಸಿ ಪದವಿಗಾಗಿ ನೊಂದಾಯಿಸಿಕೊಂಡು 1922 ರಲ್ಲಿ ಹಣದ ಸಮಸ್ಯೆ ಎಂಬ ಪ್ರಬಂಧ ಮಂಡಿಸಿ ಡಿ ಎಸ್ ಸಿ ಪದವಿ ಪಡೆಯುತ್ತಾರೆ . ಅದೇ ವರ್ಷ ಗ್ರೇಸ್ ಇನ್ ಕಾಲೇಜಿನಿಂದ ಎಲ್ ಎಲ್ ಡಿ ಪಡೆಯುತ್ತಾರೆ. 1923 ರಲ್ಲಿ ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಗಾಗಿ ನೊಂದಾಯಿಸಿಕೊಂಡು 6 ತಿಂಗಳವರೆಗೆ ಅಭ್ಯಾಸ ಮಾಡುತ್ತಾರೆ.

 • ಆರ್ಥಿಕ ಕಡುಬಡತನದಿಂದ ವ್ಯಾಸಂಗವನ್ನು ಮಧ್ಯದಲ್ಲಿಯೇ ನಿಲ್ಲಿಸಿ ಭಾರತಕ್ಕೆ ಬಂದು ವಕೀಲ ವ್ರತ್ತಿಯನ್ನು ಪ್ರಾರಂಭಿಸುತ್ತಾರೆ. ಕೆಲವು ದಿನಗಳ ಕಾಲ ಟ್ಯಾಕ್ಸ್ ಪ್ರ್ಯಾಕ್ಟಿಶನರ್ ಆಗಿಯೂ ಕೆಲಸ ಮಾಡುತ್ತಾರೆ. ಸಾಮಾಜಿಕ ಸೇವೆಯಲ್ಲಿ ಕಾಲಜಿಯುಳ್ಳ ಇವರು ಸಾಮಾಜಿಕ ಸೇವೆಗಾಗಿ ತಮ್ಮ ಬದುಕನ್ನು ಗುರುತಿಸಿಕೊಳ್ಳುತ್ತಾರೆ.

 • ದಲಿತ ವರ್ಗದವರನ್ನು ಜಾಗೃತರನ್ನಾಗಿ ಮಾಡಲು ಅವರಲ್ಲಿ ಶಿಕ್ಷಣದ ಪ್ರಸಾರ ಮಾಡಲು ಸಂಸ್ಕೃತಿಯ ಬಗ್ಗೆ ತಿಳಿಸಲು ಆರ್ಥಿಕ ಸೌಕರ್ಯ ಮಾಡಲು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಇವರ ಉದ್ದೇಶವಾಗಿತ್ತು. ಅದೇ ರೀತಿ ಬಹಿಷ್ಕೃತ ಭಾರತ ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಸಾಮಾಜಿಕ ಹೋರಾಟದ ಜೀವನ ಪ್ರಾರಂಭಿಸಿದ ಇವರು 1927ರಲ್ಲಿ ಮಹಾಡದ ಚೌಡರ ಕೆರೆಯ ನೀರನ್ನು ಮುಟ್ಟುವ ಚಳುವಳಿಯನ್ನು ಹಮ್ಮಿಕೊಳ್ಳುತ್ತಾರೆ.

 • ತನ್ನ 10 ಸಾವಿರ ಅನುಯಾಯಿಗಳೊಂದಿಗೆ ಚೌಡರ ಕೆರೆಯ ನೀರನ್ನು ಮುಟ್ಟಿಸಿ ಬಹುದಿನಗಳಿಂದ ನಿಷೇಧಿಸಿದ ಈ ಕೆರೆಯಿಂದ ನೀರು ಕುಡಿಯುವ ಹಕ್ಕು ಒತ್ತಾಯಿಸಿದರು. 1927 ರಲ್ಲಿ ಶ್ರೇಣಿ ಪದ್ದತಿಯ ವರ್ಣಾಶ್ರಮ ಹಾಗೂ ಸ್ತ್ರಿದಮನ ಮಸ್ಡಿದ ಮನಸ್ಮೃತಿಯನ್ನು ಸುತ್ತು ಹಾಕುತ್ತಾರೆ. 1930 ತನ್ನ 15 ಸಾವಿರ ಅನುಯಾಯಿಗಳೊಂದಿಗೆ ನಾಸಿಕದ ಕಾಳರಾಂ ದೇವಾಲಯದ ಪ್ರವೇಶ ಚಳುವಳಿಯನ್ನು ಮಾಡುತ್ತಾರೆ.

 • 1927ರಲ್ಲಿ ಇವರಿಗೆ ಮುಂಬಯಿಯ ಶಾಸಕಾಂಗದ ಸದಸ್ಯರಾಗಿ ಬ್ರಿಟಿಷ್ ಸರ್ಕಾರ ನೇಮಿಸುತ್ತದೆ. 1930 ರಿಂದ 1932 ವರೆಗೆ ಲಂಡನ್ನಿನಲ್ಲಿ ನಡೆಯುವ ದುಂಡು ಮೇಜಿನ ಸಮ್ಮೇಳನದಲ್ಲಿ ದಲಿತರ ಪ್ರತಿನಿಧಿಯಾಗಿ ಭಾಗವಹಿಸಿ ದಲಿತರಿಗೆ ಪ್ರತ್ಯೇಕ ಮತದಾನದ ಸೌಲಭ್ಯ ಕಲ್ಪಿಸಿಕೊಟ್ಟು ಬಹುದಿನಗಳಿಂದ ಆಳ್ವಿಕೆ ಮಾಫಿಯಾ ಅಧಿಕಾರದಿಂದ ದೂರವಿದ್ದ ದಲಿತರಿಗೆ ಆಳ್ವಿಕೆ ಮಾಡುವ ಅಧಿಕಾರವನ್ನು ದೊರಕಿಸಿಕೊಡುತ್ತಾರೆ.

 • ಇಂಗ್ಲೆಂಡಿನ ಪ್ರಧಾನಿಯಾದ ಮ್ಯಾಕ್ ಡೊನಾಲ್ಡ್ ಕೋಮುಆದೇಶದ ಮೂಲಕ ಈ ಅಧಿಕಾರವನ್ನು ದಲಿತರಿಗೆ ನೀಡುತ್ತಾರೆ. ಆದ್ರೆ ಗಾಂಧೀಜಿ ದಲಿತರಿಗೆ ಪ್ರತ್ಯೇಕ ಮತದಾನ ಬೇಡ ಹಿಂದೂ ಧರ್ಮ ಒಡೆದು ಹೋಗುತ್ತದೆಂದು ಪುಣೆಯ ಯರವಾಡ ಜೈಲಿನಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ಅಂತಿಮವಾಗಿ ಗಾಂದೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಸಂಧಾನ ನಡೆಸಿ ಪ್ರತ್ಯೇಕ ಮತ ಕ್ಷೇತ್ರದ 71 ಸೀಟುಗಳ ಬದಲ್ಲಾಗಿ 148 ಸೀಟು ಗಳ ಜಂಟಿ ಮತದಾನ ಪದ್ದತಿ ನೀಡಿ ದಲಿತರಿಗೆ ಮೀಸಲಾತಿ ನೀಡಲಾಯಿತು. ಇದು ಸೆಪ್ಟೆಂಬರ್ 24 1932 ರಲ್ಲಿ ನಡೆದಿದ್ದು ಇದನ್ನು ಪುನಾ ಒಪ್ಪಂದ ಎಂದು ಕರೆಯಲಾಯಿತು.

 • ಡಾ ಅಂಬೇಡ್ಕರ ರವರು ಅಸ್ಪೃಶ್ಯರಿಗಾಗಿ ಮತ್ತು ಅವರ ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ನಿರಂತರವಾದ ಹೋರಾಟ ಬ್ರಿಟಿಷ್ ಮತ್ತು ವರ್ಣವ್ಯವಸ್ಥೆಯ ವಿರುದ್ಧ ನಡೆಸಿದರು. 1935ರಲ್ಲಿ ಯೌಲ್ಲ ಸಮ್ಮೇಳನದಲ್ಲಿ ಅಂಬೇಡ್ಕರರವರು ತಾನು ಹಿಂದೂ ಧರ್ಮದಲ್ಲಿ ಇರುವುದಿಲ್ಲ, ನಾನು ಹಿಂದುವಾಗಿ ಹುಟ್ಟಿದ್ದು ಅನಿಶ್ಚಿತವಾಗಿ ಆದರೆ ಹಿಂದುವಾಗಿ ಸಾಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ.

 • ಅದೇ ವರ್ಷ 1935 ರಲ್ಲಿ ಅವರ ಪತ್ನಿ ರಮ್ಮ ಬಾಯಿಯವರು ತೀರಿಕೊಳ್ಳುತ್ತಾರೆ. ಡಾ ಅಂಬೇಡ್ಕರ್ ರವರಿಗೆ ಒಟ್ಟು 5 ಮಕ್ಕಳು ಹುಟ್ಟಿದ್ದು ಯಶ್ವಂತರಾವ್ ಅಂಬೇಡ್ಕರರನ್ನು ಬಿಟ್ಟರೆ ಉಳಿದವರೆಲ್ಲ ತೀರಿಕೊಳ್ಳುತ್ತಾರೆ. ಅಸ್ಪೃಶ್ಯರಿಗೆ ಅಧಿಕಾರ ಪಡೆದು 1936ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಸ್ಥಾಪಿಸಿ, ಪ್ರಾಂತೀಯ ಶಾಸಕಾಂಗದಲ್ಲಿ ನಡೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತಾರೆ.

 • ಅದರಲ್ಲಿ 15 ಅಭ್ಯರ್ಥಿಗಳು ಗೆಲ್ಲುತ್ತಾರೆ. ದಲಿತರಿಗೆ ಶಿಕ್ಷಣದ ಅವಶ್ಯಕತೆಯನ್ನು ಗಮನಿಸಿ 1946ರಲ್ಲಿ ಪೀಪಲ್ಸ್ ಎಜುಕೇಶನ್ ಇನ್ಸ್ಟಿಟ್ಯೂಶನ್ ಸ್ಥಾಪಿಸಿದರು. 1946ರಲ್ಲಿ ಸಂವಿಧಾನ ರಚನಾ ಸಭೆಗೆ ಬಂಗಾಳ ಪ್ರಾಂತದಿಂದ ಆಯ್ಕೆಯಾಗಿ ಮುಂದೆ 1947ರಲ್ಲಿ ಕರಡು ಸಮಿತಿ ಅಧ್ಯಕ್ಷರಾಗಿ ನೇಮಕ ಹೊಂದಿ, ಸತತವಾಗಿ ಮೂರು ವರ್ಷಗಳವರೆಗೆ ಹಗಲು ರಾತ್ರಿ ಸಂವಿಧಾನ ಬರೆದು 1950ರಲ್ಲಿ ಮುಗಿಸುತ್ತಾರೆ. ಅದಕ್ಕಾಗಿ ಇವರನ್ನು ಸಂವಿಧಾನದ ಶಿಲ್ಪಿ ಎಂದು ಪರಿಗಣಿಸಲಾಗಿದೆ.

 • 1947 ರಲ್ಲಿ ಕಾನೂನು ಮಂತ್ರಿಯಾಗಿ ಪಂಡಿತ ಜವಹಾರಲಾಲ್ ನೆಹರೂ ಮಂತ್ರಿ ಮಂಡಲದಲ್ಲಿ ಇವರು ಪ್ರಧಾನ್ ಮಂತ್ರಿಗೆ ಆತ್ಮೀಯರಾಗುತ್ತಾರೆ. ನೆಹರೂ ಕಲ್ಪಿಸಿದ ಸಮಾಜವಾದಿ ಪ್ರಜಾಸತ್ತಾತ್ಮಕ ರಾಜ್ಯವ್ಯವಸ್ಥೆ ಡಾ ಅಂಬೇಡ್ಕರ್ ರವರಿಂದಲೇ ಪ್ರಭಾವಿತರಾಗಿದ್ದರು. ನೆಹರುಜಿ ಹಾಕಿಕೊಂಡ ಪಂಚ ವಾರ್ಷಿಕ ಯೋಜನೆಗೆ ಅಂಬೇಡ್ಕರರವರು ಮಾರ್ಗದರ್ಶಿಗಳಾಗಿದ್ದರು. ಮತ್ತು ಭಾಕ್ರಾನಂಗಲ್ ಅಣೆಕಟ್ಟು ಕಟ್ಟಲು ಸಲಹೆ ನೀಡಿದವರೆ ಅಂಬೇಡ್ಕರರವರು.

 • ಅಂಬೇಡ್ಕರವರು ಭಾರತದ ನೀರಾವರಿ ಯೋಜನೆಯ ಜನಕನಾಗಿದ್ದು.ಉತ್ತರ ಭಾರತ ಮತ್ತು ದಕ್ಷಿಣ ಭಾರತ ನದಿಗಳ ಜೋಡಣೆಗೆ 1952 ರಲ್ಲಿ ಸಲಹೆ ನೀಡಿದರು.ನೆಹರೂರವರು ವಿದೇಶಿ ಗಣ್ಯರಿಗೆ ಇವರನ್ನು ಪರಿಚಯಿಸುವಾಗ ಇವರು ಡಾ ಅಂಬೇಡ್ಕರ್, ನನ್ನ ಮಂತ್ರಿ ಮಂಡಲದ ವಜ್ರವಾಗಿದ್ದಾರೆ,ಎಂದು ಪರಿಚಯಿಸುತ್ತಿದ್ದರು.

 • ನೆಹರು ರವರ ಸಹಕಾರ ಪಡೆದು ಅಂಬೇಡ್ಕರ್ ದೇಶದ ಮಹಿಳಾ ವಿಮೋಚನೆಯನ್ನು ಮನು ರವಾರ ಮನಸ್ಮೃತಿಯ ಮೂಲಕ ಶೋಷಿತ ಮಹಿಳೆಗೆ ಬಿಡುಗಡೆ ಗೊಳಿಸಲು ದ ಹಿಂದೂ ಕೋಡ್ ಬಿಲ್ ನ್ನು ರಚನೆ ಮಾಡಿ ಪಾರ್ಲಿಮೆಂಟಿನಲ್ಲಿ ಮಂಡಿಸಿದ್ದರು. ಸಂಪ್ರದಾಯವಾದಿಗಳಿಂದ ಕೂಡಿದ ಪಾರ್ಲಿಮೆಂಟ್ ನ ಸಭೆಯಲ್ಲಿ ಮಹಿಳೆಗೆ ಹಿಂದೂ ಕೋಡ್ ಬಿಲ್ ನಲ್ಲಿ ಕೇಳಲಾದ ಹಕ್ಕುಗಳನ್ನು ನಿರಾಕರಿಸಿತು.

 • ಹಿಂದೂ ಕೋಡ್ ಬಿಲ್ ನಲ್ಲಿ ಪ್ರಮುಖ ನಾಲ್ಕು ಅಂಶಗಳು ಇದ್ದವು 1. ಮಹಿಳೆಯು ಕೂಡ ತನ್ನ ಪತಿಯನ್ನು ಆಯ್ಕೆಮಾಡುವ ಹಕ್ಕು 2. ಪುರುಷರ ಹಾಗೆ ವಿಚ್ಚೇಧಿಸುವ ಹಕ್ಕು 3. ತಂದೆಯ ಆಸ್ತಿಯಲ್ಲಿ ಗಂಡುಮಕ್ಕಳ ಸಮನಾಗಿ ಹೆಣ್ಣುಮಗಳಿಗೂ ಆಸ್ತಿ ಹಕ್ಕು 4.ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳ ಜೊತೆಯಲ್ಲಿ ಹೆಣ್ಣುಮಕ್ಕಳಿಗೂ ಮತ್ತು ವಿಧವೆ ಸೊಸೆಗೂ ಸಮ ಪಾಲು ಹಕ್ಕು.

 • ಕೊನೆಗೆ ಹಿಂದೂ ಕೋಡ್ ಬಿಲ್ ಪಾಸಾಗದ ಕಾರಣ ಅಂಬೇಡ್ಕರ್ ರವರು ಕಾನೂನು ಮ್ಯಾಟ್ರಿ ಪದವಿಗೆ ರಾಜೀನಾಮೆ ನೀಡಿದರು. 1950 ರಲ್ಲಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಭಾರತ ಸಂವಿಧಾನ ರಚಿಸಿದ್ದಕ್ಕಾಗಿ ಇವರನ್ನು ಸಂವಿಧಾನ ಶಿಲ್ಪಿ ,ಆಧುನಿಕ ಭಾರದ ನಿರ್ಮಾಪಕ, ಸಮಾಜದ ಪ್ರವರ್ತಕ, ಎಂದು ಪರಿಗಣಿಸಿ, ಡಾಕ್ಟರ್ ಆಫ್ ಲಾ ಪದವಿ ನೀಡಿತು

 • 1953ರಲ್ಲಿ ಆಂಧ್ರಪ್ರದೇಹದ ಉಸ್ಮಾನಿಯ ವಿಶ್ವವಿದ್ಯಾಲಯ ಸಂವಿಧಾನದ ಸೇವೆಯನ್ನು ಪರಿಗಣಿಸಿ ಡಾಕ್ಟರ್ ಆಫ್ ಲಿಟರೇಚರ ಎಂಬ ಗೌರವ ಪದವಿಯನ್ನು ನೀಡಿತು. 1951ರಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು ಸಕ್ರಿಯ ರಾಜಕೀಯದಿಂದ ದೂರ ಉಳಿದು ಡಾ ಅಂಬೇಡ್ಕರ್ ರವರು ಬೌದ್ಧ ಧರ್ಮದ ಆಚಾರ ಮತ್ತು ಪ್ರಚಾರಕ್ಕಾಗಿ ಜೀವನವನ್ನು ಅರ್ಪಿಸಿಕೊಂಡರು.

 • 1951 ರಲ್ಲಿ ಜಾಗತಿಕ ಬೌದ್ಧ ಸಮ್ಮೇಳನ ರಂಗುನದಲ್ಲಿ ನಡೆಯಿತು, ಅದರಲ್ಲಿ ಭಾಗವಹಿಸಿದರು. 1954ರಲ್ಲಿ ಕಟ್ಮೊಂಡಾದಲ್ಲಿ ನಡೆದ ಜಾಗತಿಕ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿದರು. 1951ರಲ್ಲಿ ಭಾರತೀಯ ಬೌದ್ಧ ಸಂಘಟನೆಯಲ್ಲಿ ಬುದ್ಧ ಮತ್ತು ಮಾರ್ಕ್ಸ್ ಕುರಿತು ಪ್ರಬಂಧ ಮಂಡಿಸಿದರು. 1955ರಲ್ಲಿ ಭಾರತೀಯ ಬೌದ್ಧ ಮಹಾಸಭೆ ಸ್ಥಾಪಿಸಿದರು.

 • ಬದುಕಿನ ಕೊನೆಯ ದಿನಗಳಲ್ಲಿ ಡಾ ಅಂಬೇಡ್ಕರ್ ರು ಬೌದ್ಧ ಧರ್ಮ ಸ್ವೀಕಾರದ ನಿರ್ಧಾರಮಾಡಿ ಅಕ್ಟೊಬರ್ 14 1956ರಲ್ಲಿ ತನ್ನ 5ಲಕ್ಷ ಅನುಯಾಯಿಗಳೊಂದಿಗೆ ಪತ್ನಿ ಸವಿತಾ ಅಂಬೇಡ್ಕರ್ ಜೊತೆಗೆ ನಾಗ ಜನತೆಯ ಮೂಲ ನಾಡಾದ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕಾರಮಾಡಿ, ಹಿಂದುವಾಗಿ ಸಾಯಲಾರೆ ಎಂಬ ಪ್ರತಿಜ್ಞೆ ಪೂರ್ಣಗೊಳಿಸಿದರು.

 • ಇವರಿಗೆ ಬರ್ಮಾದ ಬೌದ್ಧ ಬಂತೆ, ವೀರ ಚಂದ್ರಮಣಿ ಬೌದ್ಧಧೀಕ್ಷೆ ನೀಡಿದರು. ಮುಂದೆ ಡಿಸೆಂಬರ್6 1956ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಡಿಸೆಂಬರ್7ಕ್ಕೆ ಮುಂಬಯಿಯ ದಾದರಿನಲ್ಲಿ ಬೌದ್ಧ ಧರ್ಮದ ನಿಯಮದ ಪ್ರಕಾರ ಮಹಾಪರಿನಿರ್ವಾಣದ ವಿಧಿಯನ್ನು ಅಂತ್ಯಕ್ರಿಯೆಯಲ್ಲಿ ಮಾಡಲಾಯಿತು.

Related posts

Leave a Comment