ಇಷ್ಟಾರ್ಥ ಕರುಣಿಸೋ ಕೆಂಗನಹಳ್ಳಿ ಆದಿಶಕ್ತಿ ಮಾರಮ್ಮ ಜಾತ್ರೆ ಅದ್ದೂರಿಯಾಗಿ ಜರುಗಿತು

ಪೀಣ್ಯದಾಸರಹಳ್ಳಿ : ಕೆಂಗನಹಳ್ಳಿ ಮಾರಮ್ಮ ದೇವಿ ಜಾತ್ರೆ ಪ್ರತಿ 5 ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಯುತ್ತ ಬಂದಿದ್ದು ತುಂಬಾ ಭಕ್ತರನ್ನು ಹೊಂದಿರುವ ದೇವಿಯ ಜಾತ್ರೆಗೆ ಅಕ್ಕಪಕ್ಕದ ಊರಿನ ಜನರೆಲ್ಲ ಸೇರಿ ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೋನ ಹಿನ್ನೆಲೆಯಲ್ಲಿ ಜಾತ್ರೆಯನ್ನು ಸರಳವಾಗಿ ಆಚರಿಸಿದ್ದರು. ಆದರೆ ಈ ಭಾರಿ ಸಾವಿರಾರು ಜನರು ತಂಡೋಪತಂಡವಾಗಿ ಬಂದು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೋಕಿನ ಕೆಂಗನಹಳ್ಳಿ ಗ್ರಾಮದಲ್ಲಿ ಶ್ರೀ ಮಾರಮ್ಮ ದೇವಿ ದೇವಸ್ಥಾನ, ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿಗಳು ಜಂಟಿಯಾಗಿ ಈ ಜಾತ್ರಾ ಮಹೋತ್ಸವ ನಡೆಸುತ್ತಿವೆ. ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಕೆಂಗನಹಳ್ಳಿ ಗ್ರಾಮದಲ್ಲಿ ಪುರಾತನ ಕಾಲದಿಂದ ನೆಲೆಸಿರುವ ಶ್ರೀ ಮಾರಮ್ಮ ದೇವಿಯ ಜಾತ್ರೆಯು ಹಲವು ವರ್ಷಗಳಿಂದ ಪ್ರತಿ 3ವರ್ಷಕೊಮ್ಮೆ ಜಾತ್ರೆ ನಡೆದುಕೊಂಡು ಬರುತ್ತಿದ್ದು ಈಗ 5ವರ್ಷಕೊಮ್ಮೆ ಜಾತ್ರೆ ನಡೆದುಕೊಂಡು ಬರುತ್ತಿದೆ. ಅದರಂತೆ ಈ ವರ್ಷ ಕೆಂಗನಹಳ್ಳಿ ಗ್ರಾಮಸ್ಥರು ಹಾಗೂ ಭಕ್ತರ ಸಮ್ಮುಖದಲ್ಲಿ ಜಾತ್ರೆ ನಡೆದಿದ್ದು ಕೆಂಗನಹಳ್ಳಿ ಹಾಗೂ ಸುತ್ತಮುತ್ತಲಿನ ಸುಮಾರು ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಬಂದು ತಾಯಿಯ ಆರ್ಶಿವಾದವನ್ನು ಪಡೆದುಕೊಂಡು ಹೋಗುತ್ತಾರೆ. ಗ್ರಾಮದಲ್ಲಿ ದೊಡ್ಡಾರತಿಗಳನ್ನು ಹೊತ್ತುಬಂದ ಮಹಿಳೆಯರು ದೇವಿಯ ದರ್ಶನ ಪಡೆದು ಪುನೀತರಾದರು. ಈ ವೇಳೆ ಆರತಿ ಹೊತ್ತು ಬಂದ ಮಹಿಳೆಯರು ಕೊಂಡದಲ್ಲಿ ನಡೆದುಕೊಂಡು ಹೋದರು. ಈ ತಾಯಿಗೆ ಯಾರೇ ಅರಕೆ ಹೊತ್ತಿಕೊಂಡರೆ ಆ ಅರಕೆಯನ್ನು ತಾಯಿ ತೀರಿಸುತ್ತಾಳೆ ಎಂಬ ವಾಡಿಕೆ ಇದೆ.

ಸುತ್ತಮುತ್ತಲ ಜನರು ಸಂಭ್ರಮ ಸಡಗರದಿಂದ ಭಕ್ತಿಭಾವದಿಂದ ಅಗ್ನಿಕೊಂಡದಲ್ಲಿ ನಡೆದು ದೇವಿಯ ಹರಕೆ ತೀರಿಸಿದರು. ಇದೇ ಸಂದರ್ಬದಲ್ಲಿ ಮಕ್ಕಳು ಸೇರಿದಂತೆ ಮಹಿಳೆಯರು, ಪುರುಷರು ಬಾಯಿಗೆ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು.

ಅಲ್ಲದೇ ಗ್ರಾಮದೇವತೆ ಮಾರಮ್ಮ ದೇವಿಯ ಜಾತ್ರೆಯ ಪ್ರಯುಕ್ತ ಶಾಸಕ ಎಸ್ ಆರ್ ವಿಶ್ವನಾಥ್ ಆಗಮಿಸಿ ಮಾರಮ್ಮ ದೇವಿಯ ಆಶೀರ್ವಾದ ಪಡೆದರು.

ಇದೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಬಂದು ತಾಯಿಯ ಆರ್ಶಿವಾದ ಪಡೆದುಕೊಂಡು ಹೋದರು.

Related posts

Leave a Comment