ಅನ್ನ, ಅಕ್ಷರ, ಆಶ್ರಯ, ಅಕ್ಕರೆಯ ದಾನಿ;ಬಡಮಕ್ಕಳಿಗೆ ವಿದ್ಯೆ ನೀಡಿದ ಮೈಸೂರಿನ ಜ್ಞಾನಿ – ಮಣ್ಣೆ ಮೋಹನ್

indipendent

ಮಣ್ಣೆ ಮೋಹನ್ ವಿರಚಿತ “ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಿಡಿಗಳು” ಪುಸ್ತಕದಿಂದ ಆಯ್ದ ಭಾಗ

ಗಾಂಧೀಜಿಯವರ ಅಪ್ಪಟ ಅಭಿಮಾನಿ, ಅನುಯಾಯಿಯಾದ ಆ ವ್ಯಕ್ತಿ, 1925ರಲ್ಲಿ ಗಾಂಧೀಜಿಯವರ ಭೇಟಿಗಾಗಿ ಗುಜರಾತಿನ ಸಬರಮತಿ ಆಶ್ರಮಕ್ಕೆ ಹೋಗುತ್ತಾರೆ. ಅವರ ದರ್ಶನವಾಗುತ್ತಿದ್ದಂತೆಯೇ, ಆ ವ್ಯಕ್ತಿ ಅವರ್ಣನೀಯ ಆನಂದಕ್ಕೆ ಪಕ್ಕಾಗುತ್ತಾರೆ. ಗಾಂಧೀಜಿಯವರನ್ನು ಕಂಡು ಅವರೊಡನೆ ಮಾತನಾಡುವ ಅವಕಾಶ ದೊರೆತಿದ್ದಕ್ಕೆ ಸಂಭ್ರಮಿಸುತ್ತಾರೆ.

ತಮ್ಮನ್ನು ಕಾಣಲು ಬರುವ ಪ್ರತಿಯೊಬ್ಬರನ್ನು ಮಾತನಾಡಿಸಿ, ಅವರಿಗೆ ಒಂದಷ್ಟು ಮಾರ್ಗದರ್ಶನ ನೀಡುವ ಕಾರ್ಯವನ್ನು ಗಾಂಧೀಜಿ ನಿರಂತರವಾಗಿ ಮಾಡುತ್ತಿರುತ್ತಾರೆ. ಹಾಗೆಯೇ, ಈಗಲೂ ಸಹ ಗಾಂಧೀಜಿ ದೇಶಪ್ರೇಮ, ಸರಳ ಜೀವನ, ಶಿಕ್ಷಣ ಪ್ರಸಾರ, ಸ್ವಚ್ಛತೆ, ಅಸಹಾಯಕರಿಗೆ ನೆರವು, ಹರಿಜನ ಸೇವೆ ಮುಂತಾದ ವಿಚಾರಗಳ ಬಗ್ಗೆ ಆ ವ್ಯಕ್ತಿಗೆ ಬೋಧಿಸುತ್ತಾರೆ. ಆ ಬೋಧನೆ ಆ ವ್ಯಕ್ತಿಯ ಮೇಲೆ ಅಪಾರ ಪ್ರಭಾವ ಬೀರುತ್ತದೆ. ತಮ್ಮ ಆಶಯದಂತೆಯೇ ನಡೆಯುತ್ತೇನೆಂದು ಗಾಂಧೀಜಿಯವರಿಗೆ ಭರವಸೆ ನೀಡುತ್ತಾರೆ. ತನ್ನ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಮೀಸಲಿಡಲು ನಿಶ್ಚಯಿಸುತ್ತಾರೆ. ಹಾಗೆಯೇ ನಡೆದುಕೊಳ್ಳುತ್ತಾರೆ ಕೂಡ. ಆ ವ್ಯಕ್ತಿಯೇ ಟಿ ಎಸ್ ಸುಬ್ಬಣ್ಣ.

ಶತಮಾನಗಳ ಹಿಂದಿನ ದಲಿತ ಪ್ರೇಮಿ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು, ಸುಬ್ಬಣ್ಣ ಅವರ ಹುಟ್ಟೂರು. ಅವರ ತಂದೆ ಈಶ್ವರಯ್ಯ ಊರಿನ ದೇವಾಲಯದಲ್ಲಿ ಅರ್ಚಕರಾಗಿರುತ್ತಾರೆ. ತಗಡೂರಿನಲ್ಲಿಯೇ ಅವರ ಪ್ರಾಥಮಿಕ ಶಿಕ್ಷಣ ಜರುಗುತ್ತದೆ. ಮನೆಯಲ್ಲಿ ಸಾಂಪ್ರದಾಯಸ್ಥ ಜೀವನ ಪದ್ಧತಿ, ಆದರೆ ಸುಬ್ಬಣ್ಣನದು ಇದಕ್ಕೆ ವ್ಯತಿರಿಕ್ತ ವ್ಯಕ್ತಿತ್ವ. ಎಲ್ಲಾ ಜಾತಿಯ ಗೆಳೆಯರೊಂದಿಗೆ ಸಹಜವಾಗಿ ಸ್ಪಂದಿಸುವ ಸ್ವಭಾವ ಸುಬ್ಬಣ್ಣನದು. ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದಂತೆ ತಾಯಿಯಿಂದ, ಮಡಿ ಮೈಲಿಗೆಯ ಕಾರಣಕ್ಕೆ ಸ್ನಾನದ ಶಿಕ್ಷೆ ಸುಬ್ಬಣ್ಣನಿಗೆ.‌

ತಗಡೂರು ರಾಮಚಂದ್ರರಾಯರು ಆ ಕಾಲದ ಪ್ರಸಿದ್ಧ ಗಾಂಧಿವಾದಿ. ಅವರು ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳುವಳಿಯನ್ನು ಸಂಘಟಿಸುತ್ತಿರುತ್ತಾರೆ. ಶಾರದಾಪ್ರಸಾದ್, ಎಂ.ಎನ್. ಜೋಯಿಸ್, ಎ. ರಾಮಣ್ಣ ಮುಂತಾದವರು ಚಳುವಳಿಯಲ್ಲಿ ಸಕ್ರಿಯರಾಗಿರುತ್ತಾರೆ. ತಗಡೂರು, ಬದನವಾಳು ಗ್ರಾಮಗಳಿಗೆ 1925ರಲ್ಲಿ ಗಾಂಧೀಜಿ ಭೇಟಿ ನೀಡುತ್ತಾರೆ. ಗಾಂಧೀಜಿಯವರನ್ನು ನೋಡಲು ಬಂದ ತರುಣ ಸುಬ್ಬಣ್ಣ, ಆ ಹಿರಿಯರ ಜೊತೆ ತಾನೂ ಚಳುವಳಿಗೆ ಧುಮುಕುತ್ತಾರೆ.

ಸ್ವಾತಂತ್ರ್ಯ ಚಳುವಳಿಯ ಜೊತೆ ಜೊತೆಗೆ ಸಾಮಾಜಿಕ ಬದಲಾವಣೆ ಕೂಡ ಆ ಕಾಲದ ತುರ್ತು ಅಗತ್ಯತೆಯಾಗಿರುತ್ತದೆ. ಹಾಗಾಗಿ ಸುಬ್ಬಣ್ಣನವರು, ತಗಡೂರು ರಾಮಚಂದ್ರರಾಯರ ಜೊತೆ ಕೂಡಿಕೊಂಡು, ತನ್ನೂರಿನಲ್ಲಿ ಹರಿಜನರ ದೇವಾಲಯ ಪ್ರವೇಶಕ್ಕಾಗಿ ಪ್ರಯತ್ನಿಸುತ್ತಾರೆ. ಇದಕ್ಕೆ ಸವರ್ಣಿಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತದೆ. ಮತ್ತೊಂದೆಡೆ ಈ ಪ್ರಯತ್ನದಲ್ಲಿ, ದಲಿತರೇ ಭಯಪಟ್ಟು ಹಿಂದೆ ಸರಿಯುತ್ತಾರೆ. ದಲಿತರಲ್ಲಿ ಧೈರ್ಯ ತುಂಬುವ ಸುಬ್ಬಣ್ಣ ಅವರ ಪ್ರಯತ್ನ ವಿಫಲವಾಗುತ್ತದೆ. ನಂತರ ತರುಣ ಸುಬ್ಬಣ್ಣ ಮತ್ತು ತಗಡೂರು ರಾಮಚಂದ್ರರಾಯರು ಸೇರಿ ದಲಿತ ಕೇರಿಯಲ್ಲಿಯೇ ಗಣೇಶನ ದೇವಾಲಯ ನಿರ್ಮಿಸಿ, ದಲಿತರಿಂದಲೇ ಪೂಜಾ ವ್ಯವಸ್ಥೆ ಮಾಡಿಸಿ, ಅವರಲ್ಲಿ ಸ್ವಾಭಿಮಾನ, ಸ್ವಾವಲಂಬನೆ, ಸಮಾನತೆಯ ಹೆಮ್ಮೆ ಮೂಡಿಸುತ್ತಾರೆ.

ತರುಣ ಸುಬ್ಬಣ್ಣ ಇಷ್ಟಕ್ಕೆ ಸುಮ್ಮನಾಗದೆ ದಲಿತ ಕೇರಿಯ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಹಾಗೆಯೇ ದಲಿತರೊಂದಿಗೆ ಸಹಭೋಜನವನ್ನು ಮಾಡುತ್ತಾರೆ. ಇಂದಿಗೆ ನೂರು ವರ್ಷಗಳ ಹಿಂದಿನ ಅವತ್ತಿನ ಕಾಲಘಟ್ಟದಲ್ಲಿ, ತರುಣ ಸುಬ್ಬಣ್ಣನ ಈ ಕಾರ್ಯಗಳು, ಸವರ್ಣಿಯರ ಕಣ್ಣನ್ನು ಕೆಂಪಗಾಗಿಸುತ್ತವೆ. ಅವರಿಗೆ, ಸುಬ್ಬಣ್ಣ ಭಯೋತ್ಪಾದಕನಂತೆ ಕಾಣಿಸುತ್ತಾರೆ. ಸುಬ್ಬಣ್ಣನವರ ಕ್ರಾಂತಿಕಾರಿ ನಿಲುವುಗಳು, ಅವರುಗಳಿಗೆ ಭಯೋತ್ಪಾದನೆಯೆಂಬಂತೆ ಕಾಣಿಸುತ್ತವೆ.

ಗ್ರಾಮಸ್ಥರು ಸುಬ್ಬಣ್ಣನವರ ಮೇಲಿನ ಕೋಪವನ್ನು ಅವರ ತಂದೆ ಮೇಲೆ ತೋರಿಸುತ್ತಾರೆ. ಸುಬ್ಬಣ್ಣನವರ ತಂದೆಯವರನ್ನು ಗ್ರಾಮಸ್ಥರು ಮುತ್ತಿಗೆ ಹಾಕಿ, ಮಗನಿಗೆ ಬುದ್ಧಿ ಕಲಿಸದಿದ್ದರೆ ಅರ್ಚಕ ವೃತ್ತಿ ತ್ಯಜಿಸಬೇಕಾಗುತ್ತದೆಂದು ಎಚ್ಚರಿಕೆ ನೀಡುತ್ತಾರೆ. ಇದರಿಂದ ಮನನೊಂದ ಈಶ್ವರಯ್ಯನವರು ಮಗನಿಗೆ ಬುದ್ಧಿ ಕಲಿಸಲು ಮನೆಯಿಂದ ಹೊರಗಟ್ಟುತ್ತಾರೆ. ಆದರೂ ಸಮಾಧಾನಗೊಳ್ಳದ ಗ್ರಾಮಸ್ಥರು, ಈಶ್ವರಯ್ಯರನ್ನು ಅರ್ಚಕ ವೃತ್ತಿಯಿಂದ ಬಿಡಿಸುತ್ತಾರೆ.

ತಮ್ಮ ಮುಂದಿನ ಜೀವನ ಹೇಗೆಂದು ದಂಪತಿಗಳು ಚಿಂತಾಕ್ರಾಂತರಾಗುತ್ತಾರೆ. ಮಾಡಲು ಕೆಲಸವೇ ಇಲ್ಲವೆಂದ ಮೇಲೆ ಊರಿನಲ್ಲಿದ್ದು ಪ್ರಯೋಜನವೇನೆಂದು, ಸುಬ್ಬಣ್ಣನವರ ಕುಟುಂಬ ತಗಡೂರನ್ನು ತೊರೆದು ಮೈಸೂರಿಗೆ ಬಂದು ನೆಲೆಸುತ್ತದೆ. ಈಶ್ವರಯ್ಯನವರು ಅಲ್ಲಿನ ದೇವಾಲಯವೊಂದರಲ್ಲಿ ಅರ್ಚಕ ವೃತ್ತಿಯನ್ನು ಮುಂದುವರಿಸುತ್ತಾರೆ. ಮಗನನ್ನು ಹುಡುಕಿ ಮತ್ತೆ ತಮ್ಮೊಡನೆ ಸೇರಿಸಿಕೊಳ್ಳುತ್ತಾರೆ. ಮೈಸೂರಿನ ವೆಸ್ಲಿ ಮಿಷನ್ ಶಾಲೆಗೆ ಸುಬ್ಬಣ್ಣ ಅವರನ್ನು ಸೇರಿಸುತ್ತಾರೆ.

ಸ್ವಾತಂತ್ರ್ಯ ಚಳುವಳಿಯ, ಸಕ್ರಿಯ ತರುಣ

ಆ ಸಂದರ್ಭದಲ್ಲಿ ಮೈಸೂರಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಕಾವು ಜೋರಾಗಿಯೇ ಇರುತ್ತದೆ. ಬ್ರಿಟಿಷರ ವಿರುದ್ಧದ ಅನೇಕ ಚಳುವಳಿಗಳಲ್ಲಿ ಭಾಗವಹಿಸಿ,’ಮೈಸೂರು ಸಿಂಹ’ ಎಂದೇ ಹೆಸರಾಗಿದ್ದ ಎಂ. ಎನ್. ಜೋಯಿಸ್; ಮೈಸೂರು ಕಾಂಗ್ರೆಸ್ಸಿನ ಸಂಸ್ಥಾಪಕರು ಹಾಗೂ ಪ್ರಥಮ ಅಧ್ಯಕ್ಷರಾಗಿದ್ದ ಟಿ. ಸಿದ್ಧಲಿಂಗಯ್ಯ; ಮೈಸೂರು ಸಂಸ್ಥಾನ ಪ್ರದೇಶದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದವರಲ್ಲಿ ಅಗ್ರಗಣ್ಯರಾದ ಕೀರ್ತಿಶೇಷ ಎಚ್.ಸಿ. ದಾಸಪ್ಪ; ‘ಧ್ವಜ ಸತ್ಯಾಗ್ರಹ’, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ’, ಮುಂತಾದ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಭಾರಿ ಜೈಲುಶಿಕ್ಷೆ ಅನುಭವಿಸಿದ್ದ ಎ. ರಾಮಣ್ಣ; ಭೂದಾನ, ಗ್ರಾಮದಾನ ಹಾಗೂ ಖಾದಿ ಚಳುವಳಿಗಳಲ್ಲಿ ನೇತಾರರಾಗಿ ಭಾಗವಹಿಸಿ, ‘ತಗಡೂರಿನ ಗಾಂಧಿ’, ‘ಕರ್ನಾಟಕದ ಗಾಂಧಿ’ ಎಂದು ಕರೆಸಿಕೊಂಡ ತಗಡೂರು ರಾಮಚಂದ್ರರಾಯರು; ಸೀತಾರಾಮಶಾಸ್ತ್ರಿ; ಶಾರದಾಪ್ರಸಾದ್– ಮೊದಲಾದವರು ಸ್ವಾತಂತ್ರ್ಯ ಚಳವಳಿಯ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು.

ಮೈಸೂರಿನಲ್ಲಿ ಎಲ್ಲೇ ಆಗಲಿ ಸ್ವಾತಂತ್ರ್ಯ ಹೋರಾಟದ ಪ್ರತಿಭಟನೆಗಳು ಕಂಡ ಕೂಡಲೇ ತರುಣ ಸುಬ್ಬಣ್ಣ ಅಲ್ಲಿಗೆ ಓಡಿ ಹೋಗಿ ತಾವೂ ಭಾಗವಹಿಸುತ್ತಿದ್ದರು. ಸ್ವಾತಂತ್ರ್ಯದ ಘೋಷಣೆ ಕಿವಿ ಮೇಲೆ ಬೀಳುತ್ತಿದ್ದಂತೆ ಶಾಲೆಯಿಂದಲೇ ಎದ್ದು ಓಡಿ ಹೋಗುತ್ತಿದ್ದರು. ಅಷ್ಟರಮಟ್ಟಿಗೆ ತರುಣ ಸುಬ್ಬಣ್ಣ
ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಟದ ಮನೋಭಾವ ಹೊಂದಿದ್ದರು. ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ, ಕ್ರಾಂತಿಕಾರಕ ಹೋರಾಟಗಳಲ್ಲಿ ಸುಬ್ಬಣ್ಣನವರು ಮುಂಚೂಣಿಯಲ್ಲಿದ್ದರು. ಸೇತುವೆ ಸ್ಪೋಟ, ಬ್ರಿಟಿಷ್ ಅಧಿಕಾರಿಗಳ ಮೇಲೆ ದಾಳಿ- ಮುಂತಾದ ಯೋಜನೆಗಳನ್ನು ರೂಪಿಸುವುದರಲ್ಲಿ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಒಮ್ಮೆ ಚಳುವಳಿಯೊಂದರಲ್ಲಿ ಭಾಗವಹಿಸಿದ್ದ ಅವರಿಗೆ ಪೊಲೀಸರ ಲಾಠಿ ಏಟಿನಿಂದ ರಕ್ತಸ್ರಾವವಾಗುತ್ತದೆ. ಇದರಿಂದ ಆತಂಕಗೊಂಡು ಪೋಷಕರು, ಸುಬ್ಬಣ್ಣನವರನ್ನು ಸಂಸಾರ ಬಂಧನದಲ್ಲಿ ಕಟ್ಟಿಹಾಕಲು ನಿರ್ಧರಿಸಿ, ಸಂಬಂಧದ ಹೆಣ್ಣನ್ನು ನೋಡಿ ಮದುವೆಯ ಪ್ರಸ್ತಾಪ ಮಾಡುತ್ತಾರೆ. ಆದರೆ ಸುಬ್ಬಣ್ಣ ಪೋಷಕರ ಕೋರಿಕೆಯನ್ನು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ‘ನನಗೆ ವೈಯಕ್ತಿಕ ಜೀವನಕ್ಕಿಂತ ಸಾರ್ವಜನಿಕ ಜೀವನವೇ ಮುಖ್ಯ’ ಎಂದು ಪೋಷಕರಿಗೆ ಖಡಾಖಂಡಿತವಾಗಿ ತಿಳಿಸುತ್ತಾರೆ. ಹಾಗೆಯೇ ಕೊನೆಯವರೆಗೂ ಸುಬ್ಬಣ್ಣ ಮದುವೆ ಆಗದೆ ಉಳಿದು, ಸಮಾಜ ಸೇವೆಯಲ್ಲಿ ಸಾರ್ಥಕ್ಯವನ್ನು ಕಾಣುತ್ತಾರೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವವರನ್ನು ಬಂಧಿಸಲು ಪೊಲೀಸರ ಹುಡುಕಾಟ ಆರಂಭವಾಗುತ್ತದೆ. ಸುಬ್ಬಣ್ಣನವರು ಪೊಲೀಸರ ಕಣ್ತಪ್ಪಿಸಲು ಮಾರುವೇಷದಲ್ಲಿ ಓಡಾಡುತ್ತಿದ್ದರು. ಗುರುತು ಸಿಗದ ಹಾಗೆ ಮೈಕೈಗೆ ಇದ್ದಿಲು ಮಸಿಯನ್ನು ಬಳಿದುಕೊಂಡು ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ಪೊಲೀಸಿನವರ ಹುಡುಕಾಟ ತೀವ್ರವಾದಾಗ ರಸ್ತೆಬದಿಯ ಸಿಮೆಂಟ್ ಮೋರಿ ಒಳಗಡೆ ಒಂದೂವರೆ ದಿನ ತಲೆಮರೆಸಿಕೊಂಡಿದ್ದೂ ಉಂಟು.

ಗಾಂಧೀಜಿಯವರ ಭೇಟಿ

ಸುಬ್ಬಣ್ಣನವರಿಗೆ ಗಾಂಧೀಜಿಯವರನ್ನು ವೈಯಕ್ತಿಕವಾಗಿ ಕಾಣಬೇಕೆಂಬ ತುಡಿತ ಕಾಡತೊಡಗುತ್ತದೆ. ಅವರನ್ನು ಕಾಣಲೇಬೇಕೆಂದು ದೃಢನಿಶ್ಚಯ ಮಾಡುತ್ತಾರೆ. ಪರಿಚಿತರ ಬಳಿ ಅಷ್ಟಿಷ್ಟು ಹಣ ಸಂಗ್ರಹಿಸಿ ಹೋಗಲು ಸಿದ್ದಗೊಳ್ಳುತ್ತಾರೆ. ಅಂತೆಯೇ 1925ರಲ್ಲಿ ಗಾಂಧೀಜಿಯವರ ಭೇಟಿಗಾಗಿ ಗುಜರಾತಿನ ಸಬರಮತಿ ಆಶ್ರಮಕ್ಕೆ ಹೋಗುತ್ತಾರೆ. ಗಾಂಧೀಜಿಯವರ ದರ್ಶನದಿಂದ ಸಂತೃಪ್ತಗೊಂಡು, ಅವರಿಂದ ಮಾರ್ಗದರ್ಶನ ಪಡೆದು ಹಿಂದಿರುಗುತ್ತಾರೆ. ಆನಂತರ ತಮ್ಮ ಕ್ರಾಂತಿಕಾರಕ ಚಳುವಳಿಯನ್ನು ಕೈಬಿಟ್ಟು, ಶಾಂತಿಯುತ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಶ್ರೀಸಾಮಾನ್ಯರಿಗೂ ಶಿಕ್ಷಣ

ಸಬರಮತಿ ಆಶ್ರಮದಿಂದ ಮರಳಿದ ಸುಬ್ಬಣ್ಣನವರು ತಮ್ಮ ಸಾರ್ವಜನಿಕ ಸೇವೆಯನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ತೊಡುತ್ತಾರೆ. ಶಿಕ್ಷಣ ಸಾಮಾನ್ಯರಿಂದ ದೂರ ಉಳಿದಿದ್ದ ಕಾಲವದು. ಹಾಗಾಗಿ ಸಾಮಾನ್ಯರಿಗೂ ಶಿಕ್ಷಣ ದೊರಕಿಸಲು ನಿರ್ಧರಿಸುತ್ತಾರೆ. ಮೈಸೂರಿನಲ್ಲಿ ಸಾಧಾರಣ ಹುಲ್ಲಿನ ಮನೆಯೊಂದರಲ್ಲಿ ಕೆಲವು ಬಡವಿದ್ಯಾರ್ಥಿಗಳನ್ನು ಸೇರಿಸಿಕೊಂಡು 1930ರಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ಪ್ರಾರಂಭಿಸುತ್ತಾರೆ.

ಜಿಲ್ಲೆಯಾದ್ಯಂತ ಸಂಚರಿಸಿ, ಕುಗ್ರಾಮಗಳು, ನಗರ ಪ್ರದೇಶದಿಂದ ದೂರವಿರುವ ಗ್ರಾಮಗಳು, ಗುಡ್ಡಗಾಡು ಪ್ರದೇಶಗಳಲ್ಲಿ ಮಕ್ಕಳನ್ನು ಓದಿಸಲು ಶಕ್ತವಲ್ಲದ ಕುಟುಂಬಗಳನ್ನು ಬೇಟಿಯಾಗಿ, ಅವರ ಮಕ್ಕಳನ್ನು ವಿದ್ಯಾರ್ಥಿನಿಲಯಕ್ಕೆ ಸೇರಿಸಲು ಕೋರಿಕೊಳ್ಳುತ್ತಾರೆ.
ಜಾತಿ ಧರ್ಮದ ಭೇದವಿಲ್ಲದೆ ಬಡಮಕ್ಕಳಿಗೆ ಆಶ್ರಯ ನೀಡಿ ಶಿಕ್ಷಣ ನೀಡತೊಡಗುತ್ತಾರೆ. ದಾನಿಗಳಿಂದ ಹಣ ಸಂಗ್ರಹಿಸಿ ಮಕ್ಕಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸುತ್ತಾರೆ. ಬಟ್ಟೆ ಅಂಗಡಿಗಳು, ದಿನಸಿ ಅಂಗಡಿಗಳು ಹಾಗೂ ಮನೆಮನೆಗೂ ಹೋಗಿ ಭಿಕ್ಷೆ ಬೇಡಿ ಮಕ್ಕಳಿಗೆ ಬಟ್ಟೆ, ಅಡುಗೆ ಮಾಡಲು ದಿನಸಿ ಪದಾರ್ಥಗಳನ್ನು ತರುತ್ತಾರೆ.

ಎಲ್ಲಾ ಜಾತಿಯವರನ್ನು ಒಂದೇ ಕಡೆ ಇಟ್ಟುಕೊಂಡಿರುವುದಕ್ಕೆ ಕೆಲವು ಮೇಲ್ಜಾತಿಯ ಜಾತಿವಾದಿಗಳಿಂದ ಸುಬ್ಬಣ್ಣನವರಿಗೆ ಬೆದರಿಕೆಗಳು ಬರುತ್ತವೆ. ಅವುಗಳಿಗೆಲ್ಲ ಸೊಪ್ಪು ಹಾಕದ ಸುಬ್ಬಣ್ಣ, ತಮ್ಮ ವಿದ್ಯಾರ್ಥಿ ನಿಲಯವನ್ನು ವಿಸ್ತರಿಸುತ್ತ ಹೋಗುತ್ತಾರೆ. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಅನೇಕ ಅಸಹಾಯಕರ ಪಾಲಿಗೆ ಆ ವಿದ್ಯಾರ್ಥಿನಿಲಯ ‘ಸರಸ್ವತಿ ಮಂದಿರ’ವೇ ಆಗುತ್ತದೆ.

ಸಾಮಾಜಿಕ ಸೇವೆಯ ನಡುವೆಯೂ ಸುಬ್ಬಣ್ಣನವರು, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ದೇಶಪ್ರೇಮವನ್ನು ಇನ್ನಷ್ಟು ಮೆರೆಯುತ್ತಾರೆ. ಚಳುವಳಿಗಳನ್ನು ಸಂಘಟಿಸುವಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸುತ್ತಾರೆ.

ಸುಬ್ಬಣ್ಣನವರ ‘ಸರಸ್ವತಿ ಮಂದಿರ’ದ ಸೇವೆ ಒಬ್ಬರ ಬಾಯಿಂದ ಮತ್ತೊಬ್ಬರಿಗೆ ಪ್ರಚುರವಾಗುತ್ತದೆ. ಎಲ್ಲರ ಗಮನ ಅತ್ತ ಹರಿಯುತ್ತದೆ. ಇವರ ಸೇವೆಯನ್ನು ಪರಿಗಣಿಸಿ ಹಾಗೂ ಇನ್ನಷ್ಟು ಸೇವೆಯನ್ನು ನಿರೀಕ್ಷಿಸಿ, ಮೈಸೂರಿನ ನಗರ ಸುಧಾರಣಾ ಟ್ರಸ್ಟ್‌ ಬೋರ್ಡ್‌ (ಸಿಐಟಿಬಿ) ಒಂದು ದೊಡ್ಡ ನಿವೇಶನವನ್ನು ವಿದ್ಯಾರಣ್ಯಪುರಂನಲ್ಲಿ ನೀಡುತ್ತದೆ. ಇಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿನಿಲಯ ನಿರ್ಮಿಸಲು ಸುಬ್ಬಣ್ಣ ನಿಶ್ಚಯಿಸುತ್ತಾರೆ. ಕೊಡಗಿನ ದೇವಿಸಾಕಮ್ಮ ಅವರ ಉದಾರ ನೆರವು ಹಾಗೂ ಅನೇಕರ ನೆರವಿನಿಂದ 1951ರ ಫೆಬ್ರುವರಿ 16ರಂದು ಸಾರ್ವಜನಿಕ ವಿದ್ಯಾರ್ಥಿನಿಲಯ ಹಾಗೂ ಸಾರ್ವಜನಿಕ ಪ್ರೌಢಶಾಲೆ ಕಟ್ಟಡದ ಶಂಕುಸ್ಥಾಪನೆ ನೆರವೇರುತ್ತದೆ.

ಸುಬ್ಬಣ್ಣನವರು ತಮ್ಮ ವಿದ್ಯಾರ್ಥಿನಿಲಯದ ಕಿರಿಯ ವಯಸ್ಸಿನ ಮಕ್ಕಳಿಗೆ, ತಾವೇ ಸ್ನಾನ ಮಾಡಿಸುತ್ತಿದ್ದಲ್ಲದೆ, ಅವರ ಬಟ್ಟೆಯನ್ನು ತಾವೇ ಒಗೆದು ಇಸ್ತ್ರಿ ಮಾಡಿಕೊಡುತ್ತಿದ್ದರು. ಮಕ್ಕಳಿಗೆ ಕಾಯಿಲೆ – ಕಸಾಲೆ ಆದರೆ ತಮ್ಮ ಕೈಯಿಂದಲೇ ಆರೈಕೆ ಮಾಡುತ್ತಿದ್ದರು. ಅಡುಗೆ ಭಟ್ಟರಿಗೆ ಸಂಬಳ ಕೊಡಲು ಆಗದೆ ತಾವೇ ಅಡುಗೆ ತಯಾರಿಸಿ ಮಕ್ಕಳಿಗೆ ಬಡಿಸುತ್ತಿದ್ದರು. ಸುಬ್ಬಣ್ಣನವರ ಮಾತೃ ಸ್ವರೂಪಿ ವ್ಯಕ್ತಿತ್ವಕ್ಕೆ ಇದಕ್ಕಿಂತ ಬೇರೆ ಉದಾರಣೆ ಬೇಕೆ? ಅಸಹಾಯಕ ಮಕ್ಕಳ ಶಿಕ್ಷಣಕ್ಕೆ ಟೊಂಕಕಟ್ಟಿ ನಿಂತಿದ್ದ ಅವರು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ಒಟ್ಟು ಹನ್ನೊಂದು ಸಾರ್ವಜನಿಕ ಪ್ರೌಢಶಾಲೆಗಳನ್ನು ತೆರೆದಿದ್ದಾರೆ. ಎರಡು ವಿದ್ಯಾರ್ಥಿನಿಲಯಗಳಿವೆ. ಆ ಪೈಕಿ ಒಂದು ಬಾಲಕಿಯರ ವಿದ್ಯಾರ್ಥಿನಿಲಯವು ಇಂದಿಗೂ ಚಾಮುಂಡಿಬೆಟ್ಟದಲ್ಲಿದೆ.

ಮಹಾರಾಜರಿಂದ ಮರ್ಯಾದೆ

ಸುಬ್ಬಣ್ಣನವರ ನಿಸ್ವಾರ್ಥ ಸೇವೆಯ ವಿಚಾರ ಮೈಸೂರು ಮಹಾರಾಜರವರೆಗೂ ಮುಟ್ಟಿತು. 1952ರಲ್ಲಿ ಕೆಂಗಲ್ ಹನುಮಂತಯ್ಯ, ಎಚ್.ಎಂ. ಚೆನ್ನಬಸಪ್ಪ, ಎ. ರಾಮಣ್ಣ ಅವರು, ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸುಬ್ಬಣ್ಣನವರ ಸಾರ್ವಜನಿಕ ವಿದ್ಯಾರ್ಥಿನಿಲಯಕ್ಕೆ ಕರೆತಂದರು. ದನದ ಕೊಟ್ಟಿಗೆಯಲ್ಲಿ ಸಾಮಾನ್ಯ ಮನುಷ್ಯನಂತೆ ಸಗಣಿ ಎತ್ತುತ್ತಿದ್ದ ಸುಬ್ಬಣ್ಣನವರನ್ನು ಕಂಡು ಮಹಾರಾಜರೇ ಆಶ್ಚರ್ಯಚಕಿತರಾದರು.

ಸುಬ್ಬಣ್ಣನವರ ಸರಳತೆ, ಸಮಾಜ ಸೇವೆಯನ್ನು ಕೊಂಡಾಡಿದ ಮಹಾರಾಜರು ಅರಮನೆಯಿಂದ ಸಹಾಯ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದರು. ಅದನ್ನು ನಯವಾಗಿಯೇ ತಿರಸ್ಕರಿಸಿದ ಸುಬ್ಬಣ್ಣ, “ನಮ್ಮ ಸಾರ್ವಜನಿಕ ವಿದ್ಯಾರ್ಥಿ ನಿಲಯ, ಸಾರ್ವಜನಿಕರಿಂದಲೇ ನಡೆಯಬೇಕೆಂಬುದು ನಮ್ಮ ಅಪೇಕ್ಷೆ” ಎಂದರು. ಮಹಾರಾಜರ ಆಸೆಯಂತೆ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಕೂಡ ಸುಬ್ಬಣ್ಣ ಕೈಮುಗಿದು ನಿರಾಕರಿಸಿದರು. “ಪ್ರಚಾರಪ್ರಿಯತೆ ಬೇಡವೆಂದು ಗಾಂಧೀಜಿಯವರು ಮಾರ್ಗದರ್ಶನ ಮಾಡಿದ್ದಾರೆ, ಅದರಂತೆ ನಡೆಯುತ್ತೇನೆ” ಎಂದು ಮಹಾರಾಜರಿಗೆ ತಿಳಿಸಿದರು. ಸುಬ್ಬಣ್ಣನವರ ಸರಳತೆ ಮತ್ತು ಸೇವೆಯ ಪರಿಗೆ ಮನಸೋತಿದ್ದ ಮಹಾರಾಜರು, ಅವರ ದೊಡ್ಡಗುಣ ಕಂಡು ಇನ್ನಷ್ಟು ಗೌರವಾದಾರ ವ್ಯಕ್ತಪಡಿಸಿದರು.

ಗಣ್ಯರಿಂದ ಗೌರವ

ಸುಬ್ಬಣ್ಣನವರ ಕೀರ್ತಿ ನಮ್ಮ ರಾಜ್ಯದಲ್ಲಷ್ಟೇ ಪಸರಿಸದೆ, ನೆರೆಯ ತಮಿಳುನಾಡಿಗೂ ಹಬ್ಬಿ, ತಮಿಳುನಾಡಿನ ಆಗಿನ ಜನಪರ ಮುಖ್ಯಮಂತ್ರಿಯಾಗಿದ್ದ ಕಾಮರಾಜ ನಾಡರ್ ಅವರು ಮೈಸೂರಿಗೆ ಬಂದು ಭೇಟಿ ಮಾಡಿ, ಅವರ ಸರಳ ವ್ಯಕ್ತಿತ್ವ ಮತ್ತು ಸಾಮಾಜಿಕ ಕೆಲಸಗಳನ್ನು ಮೆಚ್ಚಿ ಅಭಿನಂದಿಸಿದ್ದರು.

1981ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರ ಕೋರಿಕೆಯ ಮೇರೆಗೆ ವಿ.ಆರ್. ಕೃಷ್ಣಅಯ್ಯರ್ ಅವರು ಸುಬ್ಬಣ್ಣ ಅವರನ್ನು ಭೇಟಿಯಾಗಿ, ತಮ್ಮನ್ನು ಎಂಎಲ್‍ಸಿ ಮಾಡುವುದಾಗಿ ಕೇಳಿಕೊಂಡಿದ್ದರಂತೆ. ಆದರೆ ಸುಬ್ಬಣ್ಣನವರು, ಅವರ ಕೋರಿಕೆಯನ್ನು ವಿನಯದಿಂದಲೆ ತಿರಸ್ಕರಿಸಿದ್ದರು. ಇದು ಸುಬ್ಬಣ್ಣನವರ ಆದರ್ಶಮಯ ಬದುಕಿಗೊಂದು ಉತ್ತಮ ಉದಾಹರಣೆ.

ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಸಿ.ಬಸವೇಗೌಡ, ಸುಬ್ಬಣ್ಣ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್‌.ಗುರುಸ್ವಾಮಿ, ವಕೀಲರಾದ ಮಲ್ಲಿಕಾರ್ಜುನ್, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್‌.ಗುರುರಾಜ್‌
–ಇವರುಗಳು ಸುಬ್ಬಣ್ಣನವರ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಕೆಲವು ಗಣ್ಯರು.

“ಉಳ್ಳವರಿಂದ ಭಿಕ್ಷೆ ಬೇಡಿ ಮಕ್ಕಳಿಗೆ ಅನ್ನ ಹಾಗೂ ಅಕ್ಷರ ದಾನ ಮಾಡಿದ ದೇಶದ ಮೊದಲ ವ್ಯಕ್ತಿ ಟಿ.ಎಸ್‌.ಸುಬ್ಬಣ್ಣ” ಎಂಬ ಮಾಜಿ ಶಾಸಕ ಹಾಗೂ ಹಿರಿಯ ವಕೀಲ ಎಚ್‌.ಗಂಗಾಧರನ್‌ ರವರ ನುಡಿಗಳು, ತನ್ನ ಜೀವ ಮತ್ತು ಜೀವನವನ್ನು ಬೇರೆಯವರ ಸೇವೆಗಾಗಿಯೇ ಮುಡುಪಾಗಿಟ್ಟ ಸುಬ್ಬಣ್ಣನವರ ಹಿರಿಮೆಗೆ ಹಿಡಿದ ಕನ್ನಡಿಯಂತಿವೆ ಅಲ್ಲವೇ?

ಅಕ್ಟೋಬರ್ 22ರಂದು ಖಾನ್ ರವರ ಜನ್ಮದಿನ.
ಡಿಸೆಂಬರ್ 19 ರಂದು ಅವರ ಹುತಾತ್ಮತೆಯ ದಿನ.

ಈ ಎರಡು ದಿನಗಳು ಭಾರತೀಯರ ಪಾಲಿಗೆ ಸ್ಪೂರ್ತಿಯ ದಿನಗಳಾಗಲಿ. ದೇಶದೆಲ್ಲೆಡೆ ಈ ದಿನಗಳ ನೆನಪು ವಿಜೃಂಭಿಸಲಿ.

ಮಣ್ಣೆ ಮೋಹನ್
6360507617

Related posts

Leave a Comment